ಬೆಂಗಳೂರು: ನಗರದಲ್ಲಿಂದು ಕೊರೊನಾ ಸೋಂಕಿತ ಪ್ರಕರಣದಲ್ಲಿ ಸ್ವಲ್ಪ ಮಟ್ಟಿಗೆ ಇಳಿಕೆ ಕಂಡು ಬಂದಿದ್ದು, 800 ಮಂದಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಮೃತಪಟ್ಟಿರುವ ಯಾವುದೇ ಮಾಹಿತಿ ಲಭ್ಯವಾಗಿಲ್ಲ.ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 11,361 ಕ್ಕೆ ಏರಿಕೆಯಾಗಿದೆ.
ನಗರದಲ್ಲಿ 265 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಒಟ್ಟು 1,810 ಮಂದಿ ಗುಣಮುಖರಾಗಿದ್ದಾರೆ. 9395 ಸಕ್ರಿಯ ಪ್ರಕರಣಗಳಿವೆ. 155 ಮಂದಿ ಈವರೆಗೆ ಮೃತಪಟ್ಟಿದ್ದಾರೆ.
ದಕ್ಷಿಣ ವಲಯದಲ್ಲೇ ಅತಿ ಹೆಚ್ಚು ಕೊರೊನಾ
ನಗರದ ದಕ್ಷಿಣ ವಲಯದಲ್ಲಿ ಅತಿ ಹೆಚ್ಚು ಪಾಸಿಟಿವ್ ಪ್ರಕರಣಗಳಿದ್ದು, 2,947 ಮಂದಿಗೆ ಸೋಂಕು ದೃಢಪಟ್ಟಿದೆ. 309 ಮಂದಿ ಗುಣಮುಖರಾಗಿದ್ದಾರೆ. ಪೂರ್ವ ವಲಯದಲ್ಲಿ 2,345 ಮಂದಿಗೆ, ಪಶ್ಚಿಮ ವಲಯದಲ್ಲಿ 2,273 ಮಂದಿಗೆ ಹಾಗೂ ಉಳಿದ ಐದು ವಲಯದಲ್ಲಿ ಸಾವಿರಕ್ಕಿಂತ ಕಡಿಮೆ ಕೊರೊನಾ ಪಾಸಿಟಿವ್ ಇದೆ.
ಬಿಬಿಎಂಪಿಗೆ ಸಾರ್ವಜನಿಕರ ಪ್ರವೇಶ ನಿಷೇಧ
ಮೇಯರ್ ಆಪ್ತ ಸಿಬ್ಬಂದಿಯೋರ್ವರಿಗೆ ಕೊರೊನಾ ಸೋಂಕಿರುವ ಹಿನ್ನಲೆ ಮೇಯರ್ ಕ್ವಾರಂಟೈನ್ನಲ್ಲಿದ್ದಾರೆ. ಜೊತೆಗೆ ಬಿಬಿಎಂಪಿ ಸಿಬ್ಬಂದಿ, ಅಧಿಕಾರಿಗಳಿಗೆ ಕೊರೊನಾ ಸೋಂಕು ಕಂಡು ಬರುತ್ತಿರುವುದರಿಂದ, ಜುಲೈ 9 ರಿಂದ 24 ರವರೆಗೆ ಕಚೇರಿಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ.
ಇನ್ನು ಪೂರ್ವ ವಲಯದ ಜಂಟಿ ಆಯುಕ್ತೆ ಕೆ.ಆರ್ ಪಲ್ಲವಿ ಹಾಗೂ ಆಪ್ತ ಸಹಾಯಕ ಸೇರಿ ನಾಲ್ವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಪೂರ್ವ ವಲಯದ ಕಚೇರಿಯನ್ನು ಸೀಲ್ಡೌನ್ ಮಾಡಲಾಗಿದೆ.