ಬೆಂಗಳೂರು : ರೈಸ್ ಪುಲ್ಲಿಂಗ್ ಯಂತ್ರ ಮಾರಾಟ ಮಾಡುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚಿಸುತ್ತಿದ್ದ ಎಂಟು ಜನ ಆರೋಪಿಗಳನ್ನು ನಗರದ ಕೇಂದ್ರ ಅಪರಾಧ ವಿಭಾಗದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಜೇಶ್ (36), ಮೊಹಮ್ಮದ್ ಗೌಸ್ (52), ಸ್ಟೀಫನ್ (38), ಸಾಹಿಲ್ (35), ಶ್ರೀನಿವಾಸ್ (35), ವಿಕಾಸ್ (27) ಕುಮಾರ್ (29) ಹಾಗೂ ಸ್ರೀವಲ್ಸನ್ (42) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರಿನ ಹಲಸೂರು ಪೊಲೀಸ್ ಠಾಣೆ ವ್ಯಾಪ್ತಿಯ ಎಂ.ಜಿ ರಸ್ತೆಯಲ್ಲಿರುವ ಓಬೇರಾಯ್ ಹೋಟೆಲ್ನ ಬ್ಯುಸಿನೆಸ್ ಬೋರ್ಡ್ನಲ್ಲಿ ಗಿರಾಕಿಗಳನ್ನು ಬರಮಾಡಿಕೊಂಡು ಆರೋಪಿಗಳು ಕೃತ್ಯ ಎಸಗುತ್ತಿದ್ದರು. 'ತಮ್ಮ ಬಳಿ ಕೋಟ್ಯಂತರ ರೂಪಾಯಿ ಬೆಲೆಬಾಳುವ ರೈಸ್ ಪುಲ್ಲಿಂಗ್ ಯಂತ್ರವಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಅದಕ್ಕೆ ಭಾರಿ ಬೆಲೆ ಇದೆ' ಎಂದು ನಂಬಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
''ಗ್ರಾಹಕರು ನೋಡಲು ಬಯಸಿದರೆ 'ಅದೊಂದು ಶಕ್ತಿಶಾಲಿ ವಸ್ತುವಾಗಿದ್ದು, ಕಣ್ಣಿನ ದೃಷ್ಟಿ ಸಮಸ್ಯೆಯಾಗುತ್ತದೆ. ಆರೋಗ್ಯದ ಮೇಲೆ ದುಷ್ಪರಿಣಾಮಗಳಾಗುತ್ತವೆ' ಎಂದು ನಂಬಿಸಿ ನೇರವಾಗಿ ಮಾರಾಟ ಮಾಡುವುದಾಗಿ ಹೇಳಿ, ಮೊದಲು ಹಣ ಪಡೆದುಕೊಂಡು ಬಳಿಕ ಏನನ್ನೂ ನೀಡದೇ ವಂಚಿಸುತ್ತಿದ್ದರು. ದಂಧೆ ಬಗ್ಗೆ ಮಾಹಿತಿ ಪಡೆದು ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 35.30 ಲಕ್ಷ ರೂಪಾಯಿ ಹಣ ಮತ್ತು ರೈಸ್ ಪುಲ್ಲಿಂಗ್ ಯಂತ್ರ ಎನ್ನಲಾಗಿದ್ದ ವಸ್ತುವನ್ನು ವಶಕ್ಕೆ ಪಡೆಯಲಾಗಿದೆ'' ಎಂದು ಸಿಸಿಬಿಯ ಜಂಟಿ ಆಯುಕ್ತ ಡಾ. ಎಸ್.ಡಿ. ಶರಣಪ್ಪ ತಿಳಿಸಿದ್ದಾರೆ.
ಏನಿದು ರೈಸ್ ಪುಲ್ಲಿಂಗ್? : ಅಕ್ಕಿಯನ್ನು ಅಯಸ್ಕಾಂತದಂತೆ ಆಕರ್ಷಿಸುವ ಪಂಚ ಲೋಹ ಅಥವಾ ಲೋಹದ ವಸ್ತುವನ್ನು ರೈಸ್ ಪುಲ್ಲಿಂಗ್ ಯಂತ್ರ ಎನ್ನಲಾಗುತ್ತದೆ. ಸಿಡಿಲು ಬಡಿದ ತಾಮ್ರದ ತಂಬಿಗೆಯು ಈ ಗುಣ ಹೊಂದಿರುತ್ತದೆ ಎನ್ನುವ ವಂಚಕರು ಇದನ್ನು ಇರಿಸಿಕೊಂಡರೆ ಅದೃಷ್ಟ ಖುಲಾಯಿಸುತ್ತದೆ ಎಂದು ನಂಬಿಸುತ್ತಾರೆ. ಈ ಮೂಲಕ ಲೋಹದ ವಸ್ತುವನ್ನು ಕೋಟ್ಯಾಂತರ ರೂಪಾಯಿಗೆ ಮಾರಾಟ ಮಾಡುವುದು ರೈಸ್ ಪುಲ್ಲಿಂಗ್ ದಂಧೆಯಾಗಿದೆ. ಕರ್ನಾಟಕ - ಆಂಧ್ರ ಪ್ರದೇಶದ ಗಡಿ ಭಾಗಗಳಲ್ಲಿ ಹೆಚ್ಚಾಗಿ ಈ ದಂಧೆ ಅವ್ಯಾಹತವಾಗಿದೆ. ಆಗಾಗ್ಗೆ ಅನೇಕ ವಂಚನೆ ಪ್ರಕರಣಗಳು ವರದಿಯಾಗುತ್ತಿರುತ್ತವೆ.
6 ಕೋಟಿ ರೂಪಾಯಿ ವಂಚಿಸಿದ ಪ್ರಕರಣ: ಇತ್ತೀಚೆಗೆ ಅಮೆರಿಕದ ಪ್ರಮುಖ ಏಜೆನ್ಸಿ ಆಗಿರುವ ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ)ಗೆ ರೈಸ್ ಪುಲ್ಲರ್ ಯಂತ್ರ ಮಾರಾಟ ಮಾಡುವ ನೆಪದಲ್ಲಿ ಸುಮಾರು 100 ಜನರಿಗೆ 6 ಕೋಟಿ ರೂಪಾಯಿ ವಂಚಿಸಿದ ಪ್ರಕರಣ ಮಹಾರಾಷ್ಟ್ರದಲ್ಲಿ ಬೆಳಕಿಗೆ ಬಂದಿತ್ತು. ಈ ಸಂಬಂಧ ಪುಣೆಯಲ್ಲಿ ನಾಲ್ಕು ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಪೊಲೀಸರು ಐಪಿಸಿಯ ವಿವಿಧ ಸೆಕ್ಷನ್ ಮತ್ತು ಮಹಾರಾಷ್ಟ್ರ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ಕಾಯ್ದೆ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು.
ಇದನ್ನೂ ಓದಿ: ಊಟದ ತಟ್ಟೆ ತೊಳೆಯುವ ವಿಚಾರಕ್ಕೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ; ಆರೋಪಿ ಸೆರೆ