ಬೆಂಗಳೂರು: ರಾಜ್ಯ ರಾಜಧಾನಿಗೆ ಇಂದು ಕೂಡ ಮುಂಬೈನಿಂದ ಪ್ರಯಾಣಿಕರು ಬಂದಿಳಿದಿದ್ದಾರೆ. ವೇಗವಾಗಿ ಪರೀಕ್ಷಿಸಿ ಕ್ವಾರಂಟೈನ್ಗೆ ಕಳಿಸುವ ನಿಟ್ಟಿನಲ್ಲಿ ಸಂಗೊಳ್ಳಿ ರೈಲ್ವೆ ನಿಲ್ದಾಣದಲ್ಲಿ 8 ಫೀವರ್ ಕ್ಲಿನಿಕ್ ಟೇಬಲ್ಗಳನ್ನು ಸಿದ್ಧತೆ ಮಾಡಲಾಗಿದೆ.
ಮಂಗಳವಾರ ಮೊದಲ ಮುಂಬೈ ರೈಲು ಬಂದಾಗ ತಪಾಸಣೆ ಸಮಯ ಹೆಚ್ಚು ತೆಗೆದುಕೊಂಡ ಬೆನ್ನಲ್ಲೇ ಇದೀಗ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಹೆಚ್ಚುವರಿ ತಪಾಸಣಾ ಕ್ಲಿನಿಕ್ಗಳನ್ನು ಸಿದ್ಧಪಡಿಸಿದ್ದಾರೆ.
ಮುಂಬೈನಿಂದ ಉದ್ಯಾನ್ ಎಕ್ಸ್ಪ್ರೆಸ್ ಎರಡನೇ ರೈಲು ಆಗಮಿಸಿದ್ದು, ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಆತಂಕ ಹೆಚ್ಚಿದೆ. ಬಂದಿರುವ ಎಲ್ಲಾ ಪ್ರಯಾಣಿಕರನ್ನು ಕ್ವಾರಂಟೈನ್ಗೆ ಕಳುಹಿಸಲಾಗುತ್ತಿದೆ. ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಒಂದೊಂದೇ ಬೋಗಿಯಿಂದ ಪ್ರಯಾಣಿಕರನ್ನ ಇಳಿಸಲಾಗುತ್ತಿದ್ದ ದೃಶ್ಯ ಕಂಡು ಬಂದಿತು. ವೈದ್ಯಕೀಯ ತಪಾಸಣೆ ಬಳಿಕ ಕ್ವಾರಂಟೈನ್ ಕಳಿಸಲಾಗುತ್ತಿದೆ.
ಮಧ್ಯಾಹ್ನದವರೆಗೆ ಗಂಟಲು ದ್ರವದ ಟೆಸ್ಟ್ ಮಾಡಲಾಗಿದ್ದು, ಮುಂಬೈನಿಂದ ಸುಮಾರು, 630 ಮಂದಿ ಆಗಮಿಸಿದ್ದಾರೆ. ಅದರಲ್ಲಿ 90 ಮಕ್ಕಳು, ಒಬ್ಬರು ಸೈನಿಕರು ಕೂಡ ಬೆಂಗಳೂರಿಗೆ ಬಂದಿದ್ದಾರೆ ಎಂದು ರೈಲ್ವೆ ಇಲಾಖೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.