ಬೆಂಗಳೂರು: 7ನೇ ರಾಜ್ಯ ವೇತನ ಆಯೋಗದ ಕಾಲಾವಧಿಯನ್ನು 2024 ಮಾರ್ಚ್ 15ರ ವರೆಗೆ ಮತ್ತೆ ನಾಲ್ಕು ತಿಂಗಳಿಗೆ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆ ಮೂಲಕ ರಾಜ್ಯ ಸರ್ಕಾರಿ ನೌಕರರು ವೇತನ ಪರಿಷ್ಕರಣೆ ಸಂಬಂಧ ಮತ್ತಷ್ಟು ದಿನಗಳ ಕಾಲ ಕಾಯುವಂತಾಗಿದೆ. ಏಳನೇ ರಾಜ್ಯ ವೇತನ ಆಯೋಗ ತನ್ನ ಕಾರ್ಯಕಲಾಪಗಳನ್ನು ಪೂರ್ಣಗೊಳಿಸಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲು ಅನುಕೂಲವಾಗುವಂತೆ ಆಯೋಗದ ಕಾಲಾವಧಿಯನ್ನು 15-03-2024 ರವರೆಗೆ ವಿಸ್ತರಿಸಿ ಆದೇಶಿಸಿದೆ.
ರಾಜ್ಯ ಸರ್ಕಾರಿ ನೌಕರರ ವೇತನ ಶ್ರೇಣಿಗಳನ್ನು ಪರಿಷ್ಕರಿಸಲು ಮತ್ತು ನೂತನ ವೇತನ ರಚನೆ ಇತ್ಯಾದಿಗಳನ್ನು ರೂಪಿಸಲು 19-11-2022ರಲ್ಲಿ 7ನೇ ರಾಜ್ಯ ವೇತನ ಆಯೋಗವನ್ನು ಬಿಜೆಪಿ ಸರ್ಕಾರ ರಚಿಸಿತ್ತು. ಬಳಿಕ 15-05-2023ರ ಸರ್ಕಾರಿ ಆದೇಶದಲ್ಲಿ 7ನೇ ರಾಜ್ಯ ವೇತನ ಆಯೋಗದ ಕಾಲಾವಧಿಯನ್ನು ವಿಸ್ತರಿಸಲಾಗಿತ್ತು. ಬಳಿಕ ಮತ್ತೆ ಆಯೋಗದ ಕಾಲಾವಧಿಯನ್ನು ನವೆಂಬರ್ 18 ರವರೆಗೆ ವಿಸ್ತರಿಸಲಾಗಿತ್ತು. ಇದೀಗ ಮತ್ತೆ 7ನೇ ರಾಜ್ಯ ವೇತನ ಆಯೋಗದ ಕಾಲಾವಧಿಯನ್ನು 2024 ಮಾರ್ಚ್ 15ರ ವರೆಗೆ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ.
ಮಾಜಿ ಮುಖ್ಯ ಕಾರ್ಯದರ್ಶಿ ಕೆ.ಸುಧಾಕರ್ ರಾವ್ ನೇತೃತ್ವದ 7ನೇ ವೇತನ ಆಯೋಗವನ್ನು ನವೆಂಬರ್‌ನಲ್ಲಿ ರಚಿಸಲಾಗಿತ್ತು. ಅಂದು ಸರ್ಕಾರ ಹೊರಡಿಸಿದ್ದ ಆದೇಶದಂತೆ 6 ತಿಂಗಳ ಒಳಗೆ ಆಯೋಗ ತನ್ನ ವರದಿ ನೀಡಬೇಕಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಆಯೋಗದ ಅವಧಿಯನ್ನು ಮತ್ತೆ 6 ತಿಂಗಳು ವಿಸ್ತರಿಸಿತ್ತು. ಇದೀಗ ಮತ್ತೆ ನಾಲ್ಕು ತಿಂಗಳ ವರೆಗೆ ಕಾಲಾವಧಿಯನ್ನು ವಿಸ್ತರಿಸಿದೆ.
ಪಂಚ ಗ್ಯಾರಂಟಿ ಯೋಜನೆ ಹಿನ್ನೆಲೆ ರಾಜ್ಯ ಸರ್ಕಾರ ತೀವ್ರ ಆರ್ಥಿಕ ಹೊರೆ ಎದುರಿಸುತ್ತಿದೆ. ಮಧ್ಯಮಾವಧಿ ವಿತ್ತೀಯ ಯೋಜನೆ ಪ್ರಕಾರ ವೇತನ ಪರಿಷ್ಕರಣೆಗೆ ವಾರ್ಷಿಕ ₹ 12 ಸಾವಿರ ಕೋಟಿಯಿಂದ ₹ 18 ಸಾವಿರ ಕೋಟಿ ಅಗತ್ಯವಿದೆ. ಸದ್ಯದ ಪರಿಸ್ಥಿತಿಯಲ್ಲಿ ಹಣ ಹೊಂದಾಣಿಕೆ ಕಷ್ಟ ಸಾಧ್ಯವಾಗಿದ್ದು, ಆಯೋಗದ ಅವಧಿಯನ್ನು ಮತ್ತೆ ಆರು ತಿಂಗಳಿಗೆ ವಿಸ್ತರಿಸಿದೆ.