ಬೆಂಗಳೂರು: ಕಳೆದ ಕೆಲ ವಾರಗಳಿಂದ ನಗರದಲ್ಲಿ 400-500 ಮಾತ್ರ ಕಂಡು ಬರುತ್ತಿದ್ದ ಕೋವಿಡ್ ಪ್ರಕರಣಗಳು ಎರಡು ಮೂರು ದಿನಗಳಿಂದ 700ರ ಗಡಿ ದಾಟುತ್ತಿವೆ. ಜೊತೆಗೆ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿವೆ. ರಾಜಧಾನಿಯಲ್ಲಿ ಇಂದು 728 ಕೊರೊನಾ ಪ್ರಕರಣಗಳು ದೃಢಟ್ಟಿದ್ದು, 13 ಮಂದಿ ಮೃತಪಟ್ಟಿದ್ದಾರೆ. 2507 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಈ ಎಲ್ಲದರ ನಡುವೆ ನಗರದ ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಕೋವಿಡೇತರ ರೋಗಿಗಳು ಅಲೆದಾಡುತ್ತಿದ್ದಾರೆ. ಇಂದು ಮುಂಜಾನೆ 70 ವರ್ಷದ ಪುಟ್ಟಮ್ಮ ಎಂಬುವರು ಪಾರ್ಶ್ವವಾಯುವಿಗೆ ಒಳಗಾಗಿದ್ದು, ಕೂಡಲೇ ನಿಮ್ಹಾನ್ಸ್ಗೆ ತೆರಳಿದಾಗ ಬೆಡ್ ಖಾಲಿ ಇಲ್ಲ. ಬೇರೆ ಸರ್ಕಾರಿ ಆಸ್ಪತ್ರೆಗೆ ತೆರಳುವಂತೆ ಅಲ್ಲಿನ ವೈದ್ಯರು ಸೂಚಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ...ರಾಜ್ಯದಲ್ಲಿಂದು 1,279 ಮಂದಿಗೆ ಕೋವಿಡ್ ದೃಢ : 20 ಸೋಂಕಿತರು ಬಲಿ
ಅಲ್ಲಿಂದ ಕೆ.ಸಿ.ಜನರಲ್ಗೆ ಬಂದಾಗಲೂ ಅದೇ ರೀತಿ ಸಿದ್ಧ ಉತ್ತರ ಸಿಕ್ಕಿದೆ. ಇಷ್ಟಾದರೂ ಕರುಣೆ ತೋರದ ಆ್ಯಂಬುಲೆನ್ಸ್ ಚಾಲಕರು ವಾಹನದಿಂದ ಇಳಿಯುವಂತೆ ಒತ್ತಡ ಹೇರಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಈ ವೇಳೆ ರೋಗಿ ಮತ್ತು ರೋಗಿಯ ಕುಟುಂಬಕ್ಕೆ ದಿಕ್ಕು ತೋಚದಂತಾಗಿದೆ. ಸುಮಾರು ಹೊತ್ತಿನ ಬಳಿಕ ಕೆ.ಸಿ.ಜನರಲ್ನ ಜನರಲ್ ವಾರ್ಡ್ನಲ್ಲಿ ಹಾಸಿಗೆ ವ್ಯವಸ್ಥೆ ಮಾಡಿಕೊಡಲಾಗಿದೆ.
ವೈದ್ಯ ಡಾ. ಸಂಜೀವ್ ಕುಮಾರ್ ಈ ಕುರಿತು ಮಾತನಾಡಿ, ನಿನ್ನೆ ರಾತ್ರಿಯೇ ಬೆಡ್ಗಳು ಭರ್ತಿಯಾಗಿವೆ. ವಿಕ್ಟೋರಿಯಾದಲ್ಲಿ ಇರುವ 1,500 ಬೆಡ್ಗಳು, ಬೌರಿಂಗ್ನಲ್ಲೂ 500 ಬೆಡ್ಗಳನ್ನು ಸೋಂಕಿತರಿಗೆ ಮೀಸಲಿಡಲಾಗಿದೆ. ಆದರೆ ಕೆ.ಸಿ.ಜನರಲ್ನಲ್ಲಿ ಮಾತ್ರ ಕೋವಿಡ್ ಜೊತೆಗೆ ಕೋವಿಡೇತರ ರೋಗಿಗಳಿಗೂ ಚಿಕಿತ್ಸೆ ನೀಡಬೇಕಿದೆ ಎಂದರು.
ಬೆಂಗಳೂರಿನ ಹೆಚ್ಚಿನ ರೋಗಿಗಳು ಹಾಗೂ ಅಕ್ಕಪಕ್ಕದ ಜಿಲ್ಲೆಗಳಿಂದಲೂ ರೋಗಿಗಳು ಕೋವಿಡ್ ಹೊರತಾಗಿ ಅನ್ಯ ಚಿಕಿತ್ಸೆಗಳಿಗೆ ಕೆ.ಸಿ.ಜನರಲ್ಗೆ ಬರುತ್ತಿದ್ದಾರೆ. ಹೀಗಾಗಿ ಹಾಸಿಗೆಗಳ ಕೊರತೆ ಎದ್ದು ಕಾಣಿಸುತ್ತಿದೆ. 350ರ ಪೈಕಿ 260 ಬೆಡ್ಗಳು ಭರ್ತಿಗೊಂಡಿವೆ. 100 ಹಾಸಿಗೆಗಳನ್ನು ಹೆರಿಗೆಗೆ ಮೀಸಲಿಡಲಾಗಿದೆ ಎಂದರು.