ಬೆಂಗಳೂರು: ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತಿಷ್ಟಾಪನೆ ಆಗಲಿರುವ ಬೃಹತ್ ಕೆಂಪೇಗೌಡರ ಕಂಚಿನ ಪ್ರತಿಮೆಯ ಭಾಗವಾದ 4,000 ಕೆಜಿ ತೂಕದ ಖಡ್ಗವು ದೆಹಲಿಯಿಂದ ಬೆಂಗಳೂರು ತಲುಪಿದೆ. ವಿಶೇಷ ಟ್ರಕ್ನಲ್ಲಿ ಬಂದ ಈ ಖಡ್ಗವನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ ಸೋಮವಾರ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಪುರೋಹಿತರು ಖಡ್ಗಕ್ಕೆ ಸಾಂಪ್ರದಾಯಿಕ ಶಕ್ತಿಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಸಚಿವರು, ಕೆಐಎನಲ್ಲಿ 23 ಎಕರೆ ವಿಸ್ತಾರದಲ್ಲಿ ಕೆಂಪೇಗೌಡರ ಸ್ಮರಣಾರ್ಥ ಹೆರಿಟೇಜ್ ಪಾರ್ಕ್ ಅಸ್ತಿತ್ವಕ್ಕೆ ಬರಲಿದೆ. ಕಾಮಗಾರಿಗಳು ಭರದಿಂದ ಸಾಗುತ್ತಿವೆ. ಭವ್ಯ ಪ್ರತಿಮೆಗೆ 85 ಕೋಟಿ ರೂ. ವಿನಿಯೋಗಿಸಲಾಗುತ್ತಿದೆ.
ಕೆಂಪೇಗೌಡರು ಕೈಯಲ್ಲಿ ಹಿಡಿದಿರುವ ಕತ್ತಿಯು ಕ್ಷಾತ್ರಬಲವನ್ನು ಪ್ರತಿನಿಧಿಸುತ್ತಿದ್ದು, ನವಭಾರತಕ್ಕೊಂದು ಸಂಕೇತ. ವಿಮಾನ ನಿಲ್ದಾಣದ ಮೂಲಕ ಹೋಗುವವರು ಮತ್ತು ಇಲ್ಲಿಗೆ ಬಂದಿಳಿಯುವವರಿಗೆ ಕೆಂಪೇಗೌಡರ ಬೃಹದಾಕಾರದ ಪ್ರತಿಮೆಯ ನೋಟ ದಿವ್ಯ ಅನುಭೂತಿ ಮಾಡುವಂತಿರಬೇಕು ಎನ್ನುವುದು ಸರ್ಕಾರದ ಉದ್ದೇಶ ಎಂದರು.
ಈ ಸಂದರ್ಭದಲ್ಲಿ ಅಮೆರಿಕದ `ಅಕ್ಕ’ ಕನ್ನಡ ಕೂಟಗಳ ಮುಖ್ಯಸ್ಥ ಡಾ.ಅಮರನಾಥ್ ಗೌಡ, ಪ್ರಾಧಿಕಾರದ ಆಯುಕ್ತ ವಿನಯ್ ದೀಪ್, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್, ಪ್ರಾಧಿಕಾರದ ನಿರ್ದೇಶಕರು ಉಪಸ್ಥಿತರಿದ್ದರು.
ಇದನ್ನೂ ಓದಿ: ಅಕ್ಷಯ ತೃತೀಯ.. ಬೆಳಗಾವಿಯಲ್ಲಿ ನೂರಾರು ಕೋಟಿಯ ಚಿನ್ನಾಭರಣ ವ್ಯಾಪಾರದ ನಿರೀಕ್ಷೆ