ಬೆಂಗಳೂರು: ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಸೇರಿ ಜಾಮೀನಿನ ಮೇಲೆ ಹೊರ ಬರುತ್ತಿದ್ದಂತೆ ಮನಗಳ್ಳತನ ಕೃತ್ಯಗಳಲ್ಲಿ ಸಕ್ರಿಯವಾಗಿದ್ದ ಖದೀಮರ ಗ್ಯಾಂಗ್ಅನ್ನು ಕೋಣನಕುಂಟೆ ಠಾಣೆ ಪೊಲೀಸರು ಹೆಡೆಮುರಿ ಕಟ್ಟಿ ಸೆರೆಮನೆಗೆ ಅಟ್ಟಿದ್ದಾರೆ.
ಸುಲಭವಾಗಿ ಹಣ ಸಂಪಾದನೆ ಮಾಡಲು ಮನೆಕಳ್ಳತನ ಮಾಡುತ್ತಿದ್ದ ಮಹಿಳೆ ಸೇರಿ ಏಳು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಅಬ್ರಾಹಂ, ಧನುಷ್, ಕಾಂತರಾಜ್, ಅನಂತರಾಜ್, ಶೋಭಾ, ಕಾರ್ತಿಕ್ ಹಾಗೂ ಗಗನ್ ಬಂಧಿತರು. ಇವರಿಂದ 45 ಲಕ್ಷ ರೂ. ಮೌಲ್ಯದ 919 ಗ್ರಾಂ ಚಿನ್ನಾಭರಣ, ಒಂದು ಡಿಯೋ ಬೈಕ್ ಹಾಗೂ ವೇಯಿಂಗ್ ಯಂತ್ರ ಜಪ್ತಿ ಮಾಡಿಕೊಳ್ಳಲಾಗಿದೆ. ಬಂಧಿತ ಆರೋಪಿಗಳ ಪೈಕಿ ಶೋಭಾ-ಅಬ್ರಾಹಂ ಅಮ್ಮ-ಮಗನಾಗಿದ್ದಾರೆ.
ಕಳ್ಳತನವನ್ನೇ ಕಾಯಕ ಮಾಡಿಕೊಂಡಿದ್ದ ಆರೋಪಿಯಾದ 19 ವರ್ಷದ ಅಬ್ರಾಹಂ ಚಿಕ್ಕ ವಯಸ್ಸಿನಿಂದಲೇ ಕಳ್ಳತನದ ಹಾದಿ ತುಳಿದಿದ್ದ. ಕಳ್ಳತನ ಮಾಡಿದ ಚಿನ್ನಾಭರಣಗಳನ್ನು ಗಿರವಿ ಅಂಗಡಿಗೆ ಮಾರುವ ಮೂಲಕ ಈತನ ತಾಯಿ ಶೋಭಾ ಸಹ ಮಗನ ದುಷ್ಕೃತ್ಯಕ್ಕೆ ತಾನೇ ಸಾಥ್ ನೀಡಿದ್ದಳು. ಕಳ್ಳತನ ಹಿನ್ನೆಲೆ ಅಬ್ರಾಂಹನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನುಳಿದ ಆರೋಪಿಗಳು ವಿವಿಧ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡು ಜೈಲುಪಾಲಾಗಿದ್ದರು.
ಜೈಲಿನಲ್ಲೇ ಕಳ್ಳತನಕ್ಕೆ ಸ್ಕೆಚ್:
ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಪರಪ್ಪನ ಅಗ್ರಹಾರದ ಜೈಲಿನಲ್ಲಿದ್ದ ಆರೋಪಿಗಳು ಒಬ್ಬರಿಗೊಬ್ಬರೂ ಪರಿಚಿತರಾಗಿದ್ದಾರೆ. ಎಲ್ಲಾ ಆರೋಪಿಗಳು ಜಾಮೀನು ಪಡೆದು ಹೊರ ಬಂದಿದ್ದಾರೆ. ಖರ್ಚಿಗಾಗಿ ಹಾಗೂ ಮೋಜು-ಮಸ್ತಿಗಾಗಿ ಮನೆಗಳ್ಳತನ ಮಾಡಲು ಮೊದಲು ಚಂದ್ರಾ ಲೇಔಟ್ನಲ್ಲಿ ಬೈಕ್ ಕದ್ದಿದ್ದಾರೆ. ಕದ್ದ ಬೈಕ್ನಲ್ಲೇ ಹಗಲಿನಲ್ಲಿ ಲಾಕ್ ಆಗಿದ್ದ ಮನೆಗಳನ್ನು ಗುರುತಿಸಿಕೊಂಡು ರಾತ್ರಿ ವೇಳೆ ಕಬ್ಬಿಣದ ಹಾರೆಯಿಂದ ಬಾಗಿಲು ಒಡೆದು ಕಳ್ಳತನ ಮಾಡುತ್ತಿದ್ದರು. ಕದ್ದ ಚಿನ್ನಾಭರಣಗಳನ್ನು ಗಿರವಿ ಹಾಗೂ ಗೋಲ್ಡ್ ಶಾಪ್ಗಳಿಗೆ ಮಾರಿ ಅದರಿಂದ ಬರುವ ಹಣವನ್ನು ಸಮನಾಗಿ ಹಂಚಿಕೊಳ್ಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಶಶಿಕಲಾ ಆರೋಗ್ಯದಲ್ಲಿ ಏರುಪೇರು: ಜೈಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ