ಬೆಂಗಳೂರು: ಕೊರೊನಾ ಎರಡನೇ ಅಲೆಯ ತೀವ್ರತೆಯ ಪ್ರಮಾಣ ಕಡಿಮೆಯಾಗುವ ಲಕ್ಷಣವಂತೂ ಗೋಚರಿಸುತ್ತಿಲ್ಲ. ಹೀಗಾಗಿ, ರಾಜ್ಯದಲ್ಲಿ ಲಾಕ್ ಡೌನ್ ಮಾಡುವ ಪ್ರಸ್ತಾಪ ಕೇಳಿಬರುತ್ತಿದೆ. ಈ ನಡುವೆ ಮುಂಚೂಣಿ ಕೊರೊನಾ ವಾರಿಯರ್ಗಳಾಗಿರುವ ಪೊಲೀಸರು ಆತಂಕದಿಂದಲೇ ಕೆಲಸ ಮಾಡುವ ಅನಿವಾರ್ಯತೆ ಎದುರಾಗಿದೆ.
ನಗರದಲ್ಲಿ ಒಂದೇ ದಿನ ಹೊಸದಾಗಿ 68 ಪೊಲೀಸ್ ಸಿಬ್ಬಂದಿಗೆ ಕೊರೊನಾ ವಕ್ಕರಿಸಿದೆ. ಈಗ ಸೋಂಕಿತ ಪೊಲೀಸರ ಸಂಖ್ಯೆ 1,014 ಕ್ಕೆ ಏರಿದೆ. ಈ ಪೈಕಿ 752 ಮಂದಿ ಹೋಂ ಐಸೋಲೇಷನ್ನಲ್ಲಿದ್ದು, ಇದುವರೆಗೆ 209 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 11 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ವಿವಿಧ ಆಸ್ಪತ್ರೆಗಳ ಜನರಲ್ ವಾರ್ಡ್ನಲ್ಲಿ 40 , ಐಸಿಯು ಮತ್ತು ಆಕ್ಸಿಜನ್ ವಾರ್ಡ್ಗಳಲ್ಲಿ ತಲಾ ಒಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೊಸದಾಗಿ ಸೋಂಕು ಪತ್ತೆಯಾದ 68 ಮಂದಿ ಪೊಲೀಸ್ ಸಿಬ್ಬಂದಿ ಪೈಕಿ, 14 ಮಂದಿ ಮೊದಲ ಡೋಸ್ ಲಸಿಕೆ ಪಡೆದವರು ಮತ್ತು 47 ಮಂದಿ ಎರಡನೇ ಡೋಸ್ ಲಸಿಕೆ ಪಡೆದವರು. ಲಸಿಕೆ ಪಡೆಯದ 7 ಮಂದಿಯಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ.
ನಗರ ಪೊಲೀಸ್ ಇಲಾಖೆಯ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವ 18,821 ಸಿಬ್ಬಂದಿ ಪೈಕಿ, 17,892 ಮಂದಿ ಮೊದಲ ಡೋಸ್ ಲಸಿಕೆ ಪಡೆದರೆ, 14,676 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ.
ನಗರದಲ್ಲಿ ಕರ್ಫ್ಯೂ ನಿಯಮ ಉಲ್ಲಂಘಿಸಿ ಅನಗತ್ಯವಾಗಿ ಸಂಚಾರ ನಡೆಸುತ್ತಿದ್ದ 618 ಬೈಕ್ಗಳು, 19 ಆಟೊಗಳು, 18 ಕಾರುಗಳನ್ನು ನಿನ್ನೆ ಒಂದೇ ದಿನ ಜಪ್ತಿ ಮಾಡಿಕೊಳ್ಳಲಾಗಿದೆ. ಇದುವರೆಗೂ 8,302 ಬೈಕ್ಗಳು, 403 ಆಟೋಗಳು ಮತ್ತು 390 ಕಾರುಗಳು ವಶಕ್ಕೆ ಪಡೆಯಲಾಗಿದ್ದು, ಎನ್ಡಿಎಂಎನ ಅಡಿ 41 ಪ್ರಕರಣ ದಾಖಲಾಗಿದೆ.