ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ 2019-20ರ ಸಾಲಿನ ಜನವರಿ 2020ರ ವೇಳೆಗೆ 31,820 ಬೀದಿ ನಾಯಿಗಳಿಗೆ ರೇಬಿಸ್ ನಿರೋಧಕ ಚುಚ್ಚುಮದ್ದು (ಎಆರ್‌ವಿ) ಹಾಗೂ 31,820 ಬೀದಿ ನಾಯಿಗಳಿಗೆ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ (ಎಬಿಸಿ) ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದರು.
ವಿಧಾನ ಪರಿಷತ್ತಿನ ಕಾಂಗ್ರೆಸ್ ಸದಸ್ಯೆ ಡಾ. ಜಯಮಾಲಾ ಅವರು ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಮುಖ್ಯಮಂತ್ರಿ, ಬಿಬಿಎಂಪಿ ವತಿಯಿಂದ ಹಾಲಿ ಇರುವ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗಲಾಗುತ್ತಿದೆ. ಬೀದಿ ನಾಯಿಗಳಿಗೆ ಎಆರ್‌ವಿ ಲಸಿಕೆ ಮಾಡುವ ಬಗ್ಗೆ ಮಾಸ್ ರೇಬಿಸ್ ವ್ಯಾಕ್ಸಿನೇಷನ್ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಗೆ ರೇಬಿಸ್ ರೋಗ ವಿರುದ್ಧ ಎಆರ್‌ವಿ ಲಸಿಕೆ ಹಾಕಿದ ನಂತರ ಅವುಗಳಿಗೆ ಆಯಿಲ್ ಪೈಂಟ್ ಅನ್ನು ಬಳಸಿ ಗುರುತಿಸಲಾಗುತ್ತದೆ. ಆದರೆ, ಈ ಬಣ್ಣ 3-4 ವಾರಗಳ ಮಟ್ಟಿಗೆ ನಾಯಿಗಳ ಮೇಲೆ ಉಳಿಯುತ್ತದೆ. ತದನಂತರ ಬಿಸಿಲು- ಮಳೆಗೆ ಅಳಿಸುತ್ತಿರುವುದು ಗಮನಕ್ಕೆ ಬಂದಿದೆ. ಹೀಗಾಗಿ, ಬೀದಿ ನಾಯಿಗಳ ಕಿವಿಗಳ ಅಂಚಿನಲ್ಲಿ “ವಿ” (V) ಆಕಾರದಲ್ಲಿ ಕತ್ತರಿಸಿದ ಗುರುತು ಶಾಶ್ವತವಾಗಿ ಇರುವಂತೆ ಮಾಡಲಾಗುವುದು. ಇದರಿಂದ ರೇಬಿಸ್ ರೋಗದ ಶ್ವಾನಗಳನ್ನು ಸುಲಭವಾಗಿ ಪತ್ತೆಹಚ್ಚಬಹುದಾಗಿದೆ ಎಂದು ತಿಳಿಸಿದ್ದಾರೆ.
ಬಿಬಿಎಂಪಿ ವತಿಯಿಂದ ರೇಬಿಸ್ ರೋಗದ ಬಗ್ಗೆ ಜಾಗೃತಿ ಮೂಡಿಸಲು ಈಗಾಗಲೇ ಶಾಲೆ, ವಾರ್ಡ್ ಮಟ್ಟದ ಸಭೆ, ಸಾರ್ವಜನಿಕ ಪ್ರಕಟಣೆ ಹಾಗೂ ಕರಪತ್ರಗಳನ್ನು ಹಂಚುವ ಕಾರ್ಯ ಚಾಲ್ತಿಯಲ್ಲಿದೆ ಎಂದರು.