ಬೆಂಗಳೂರು: ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ, ಸಾಹಿತಿ ಕುಂ. ವೀರಭದ್ರಪ್ಪ ಸೇರಿದಂತೆ ಸುಮಾರು 64 ಕ್ಕೂ ಹೆಚ್ಚಿನವರಿಗೆ ಕೊಲೆ ಬೆದರಿಕೆಯೊಡ್ಡಲಾಗಿದೆ. ಸಹಿಷ್ಣು ಹಿಂದೂ ಎಂಬ ಹೆಸರಿನಲ್ಲಿ ಕೊಲೆ ಬೆದರಿಕೆ ಪತ್ರ ಬಂದಿದೆ. ನೀವು ಸರ್ವನಾಶದ ಹಾದಿಯಲ್ಲಿದ್ದೀರಿ, ಸಾವು ಹತ್ತಿರವಿದೆ, ನೀವು ಸಿದ್ಧವಾಗಿರಿ. ನಿಮಗೆ ಸಾವು ಯಾವ ರೂಪದಲ್ಲಿ ಬೇಕಾದರೂ ಬರಬಹುದು. ನಿಮ್ಮ ಮನೆಯವರಿಗೆ ಹೇಳಿ, ನಿಮ್ಮ ಶವ ಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಈ ಪತ್ರವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಕೊಲೆ ಬೆದರಿಕೆ ಪತ್ರ ವಿಚಾರ ಸಂಬಂಧ ಪ್ರತಿಕ್ರಿಯೆ ನೀಡಿರುವ ಹೆಚ್.ಡಿ.ಕುಮಾರಸ್ವಾಮಿ, ಈ ಬಗ್ಗೆ ಸರ್ಕಾರಕ್ಕೆ ತಿಳಿಸಲಾಗುವುದು, ಇಂತಹ ಬೆದರಿಕೆ ಪತ್ರಗಳನ್ನು ಲಘುವಾಗಿ ಪರಿಗಣಿಸಬಾರದು. ಸಾಹಿತಿ ಕುಂ.ವೀರಭದ್ರಪ್ಪ ಸೇರಿ ಲೇಖಕರಿಗೆ ತಕ್ಷಣ ಸರ್ಕಾರ ರಕ್ಷಣೆ ಕೊಡಬೇಕು. ನನಗೆ ಈ ವಿಚಾರದಲ್ಲಿ ಯಾವುದೇ ಅಂಜಿಕೆ ಇಲ್ಲ. ನಾನು ದೇವರನ್ನು ನಂಬಿದ್ದೇನೆ, ಯಾವುದಕ್ಕೂ ಹಿಂದೆ ಸರಿಯುವುದಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಈ ಹಳ್ಳಿಯಲ್ಲಿ ಮೊದಲ ಬಾರಿಗೆ ರಿಂಗಣಿಸಿದ ಮೊಬೈಲ್! ಎಲ್ಲಿದೆ ಆ ಊರು?
ಹಣೆಯಲ್ಲಿ ಬರೆದಿರುವುದನ್ನು ತಿದ್ದಲು ಇವರ್ಯಾರಿಂದಲೂ ಆಗುವುದಿಲ್ಲ. ಸಾಹಿತಿ ಎಂ.ಎಂ.ಕಲಬುರ್ಗಿ ಕೊಲೆ ಆಯ್ತು, ಇಂತಹ ಘಟನೆ ಮರಳಿ ಆಗಬಾರದು. ಹಾಗಾಗಿ ಕೂಡಲೇ ಸಾಹಿತಿಗಳಿಗೆ ರಕ್ಷಣೆ ನೀಡಬೇಕು ಎಂದ ಅವರು, ಹಿಂದಿ ಹೇರಿಕೆ ವಿಚಾರಕ್ಕೆ ಪ್ರತಿಕ್ರಿಯಿಸುತ್ತಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಇಂಗ್ಲಿಷ್ ಬರಲ್ವಾ? ಹಿಂದಿ ಹೇರಿಕೆ ವಿರುದ್ಧ ಅಭಿಯಾನಕ್ಕೆ ನನ್ನ ಬೆಂಬಲವಿದೆ. ಕನ್ನಡ ನಾಡಿನಲ್ಲಿ ಕನ್ನಡ ದೊಡ್ಡದು, ಕನ್ನಡ ಉಳಿದ್ರೆ ಇತರ ಭಾಷೆಗಳು ಎಂದು ಹೇಳಿದರು.