ಬೆಂಗಳೂರು : ವೃದ್ಧರಿರುವ ಮನೆಗಳನ್ನೇ ಟಾರ್ಗೆಟ್ ಮಾಡಿ ದರೋಡೆ ಮಾಡುತ್ತಿದ್ದ ಗ್ಯಾಂಗ್ವೊಂದನ್ನ ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ. ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣವನ್ನ ಇದೇ ವೇಳೆ ಪೊಲೀಸರು ಜಪ್ತಿ ಮಾಡಿದ್ದಾರೆ.
ಬೆಳ್ಳಂದೂರು ನಿವಾಸಿ ಲಕ್ಷ್ಮಣ್ ಎಂಬುವರು ನೀಡಿದ ದೂರಿನ ಮೇರೆಗೆ ತೇಜಸ್, ನಿತಿನ್, ಹೃತಿಕ್, ರಾಜವರ್ಧನ, ಅರುಣ್ ಹಾಗೂ ಮಹದೇವ್ ಎಂಬುವರನ್ನು ಬಂಧಿಸಿ 40 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ.
ಬೆಂಗಳೂರು ಹಾಗೂ ಹಾಸನ ಸೇರಿ ವಿವಿಧ ಕಡೆಗಳಲ್ಲಿ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ತೇಜಸ್ ಎಂಬಾತ ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರ ಬಂದಿದ್ದ. ತಮ್ಮ ಸಹಚರರನ್ನು ಜೈಲಿನಿಂದ ಬಿಡಿಸಿಕೊಳ್ಳಲು ದರೋಡೆಗೆ ಯೋಜನೆ ರೂಪಿಸಿದ್ದ. ಇದಕ್ಕೆ ಐವರು ಸಹಚರರನ್ನು ಒಗ್ಗೂಡಿಸಿ ದರೋಡೆಗೆ ಇಳಿದಿದ್ದ ಎಂದು ತಿಳಿದು ಬಂದಿದೆ.
ವೃದ್ಧರು ವಾಸವಿರುವ ಮನೆಗಳನ್ನೇ ಟಾರ್ಗೆಟ್ ಮಾಡಿಕೊಂಡಿದ್ದ ಆರೋಪಿಗಳು, ಆ.20ರಂದು ಬೆಳ್ಳಂದೂರಿನ 8ನೇ ಕ್ರಾಸ್ ಬಳಿ ಲಕ್ಷ್ಮಣ್ ಎಂಬುವರ ಮನೆಯಲ್ಲಿ ದರೋಡೆ ನಡೆಸಿದ್ದರು.
ವೃದ್ಧನ ಕೈ-ಕಾಲು ಕಟ್ಟಿ ದರೋಡೆ
ಮನೆಗೆ ನುಗಿದ್ದ ದರೋಡೆಕೋರರು ಲಕ್ಷ್ಮಣ್ ಎಂಬುವರನ್ನು ಹಗ್ಗದಿಂದ ಕೈ-ಕಾಲು ಕಟ್ಟಿದ್ದಾರೆ. ಇದಕ್ಕೆ ಪ್ರತಿರೋಧ ತೋರಿದ್ದಕ್ಕೆ ಹಲ್ಲೆ ನಡೆಸಿದ್ದಾರೆ. ಬಳಿಕ 1.40 ಲಕ್ಷ ರೂ.ನಗದು ಹಾಗೂ ಲಕ್ಷಾಂತರ ಬೆಲೆಯ ಚಿನ್ನಾಭರಣ ದೋಚಿದ್ದಾರೆ. ಕಳ್ಳರ ಶಬ್ಧ ಕೇಳಿ ಪಕ್ಕದ ಮನೆಯವರು ದೌಡಾಯಿಸುತ್ತಿದ್ದಂತೆ ಖದೀಮರು ಎಚ್ಚೆತ್ತು ಸ್ಥಳದಿಂದ ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಬೆಳ್ಳಂದೂರು ಪೊಲೀಸರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕದ್ದ ಚಿನ್ನ ಮಾರುವಾಗ ಸಿಕ್ಕಿಬಿದ್ರು
ಹಾಸನದಲ್ಲಿ ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಜೈಲು ಸೇರಿದ್ದ ಸಹಚರರನ್ನು ಜಾಮೀನಿನ ಮೇಲೆ ಬಿಡಿಸಿಕೊಳ್ಳಲು ಆರ್ಥಿಕ ಸಂಕಷ್ಟ ಎದುರಾಗಿತ್ತು. ಇದಕ್ಕೆ ದರೋಡೆಗೆ ಪ್ಲಾನ್ ಮಾಡಿದ್ದ ತೇಜಸ್, ಹೊಸ ಹುಡುಗರ ಮೂಲಕ ದರೋಡೆ ಮಾಡಿಸಿ ಕದ್ದ ಚಿನ್ನಾಭರಣವನ್ನು ಮಾರಿ ಜಾಮೀನಿಗೆ ಹಣ ಹೊಂದಿಸುತ್ತಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಓದಿ: ಸೀರೆ ಖರೀದಿಸಲು ಬಂದು 4 ಲಕ್ಷ ರೂ. ಎಗರಿಸಿ ಪರಾರಿಯಾದ ಚಾಲಾಕಿ ಕಳ್ಳಿ.. CCTV ವಿಡಿಯೋ