ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ, ಅನುದಾನ ಮತ್ತು ಅನುದಾನ ರಹಿತ ಪ್ರೌಢಶಾಲೆಗಳಲ್ಲಿನ 6 ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆಗಳನ್ನು ಪೂರ್ಣಪ್ರಮಾಣದಲ್ಲಿ ಫೆ 22 ರಿಂದ ಪುನರಾರಂಭ ಮಾಡಲಾಗುತ್ತಿದೆ.
ಓದಿ: ಪೊಲೀಸರ ಮೇಲೆ ಭಯೋತ್ಪಾದಕನಿಂದ ಗುಂಡಿನ ಸುರಿಮಳೆ... ಸಿಸಿಟಿವಿಯಲ್ಲಿ ದೃಶ್ಯಾವಳಿ ಸೆರೆ!
ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಭೆಯ ತೀರ್ಮಾನದಂತೆ, ಬೆಂಗಳೂರು ನಗರದ ಬಿಬಿಎಂಪಿ ವ್ಯಾಪ್ತಿ ಮತ್ತು ಕೇರಳ ರಾಜ್ಯದ ಗಡಿಭಾಗಕ್ಕೆ ಹೊಂದಿಕೊಂಡ ಪ್ರದೇಶಗಳನ್ನು ಹೊರತುಪಡಿಸಿ, ಉಳಿದೆಲ್ಲ ಕಡೆ 6-8 ತರಗತಿಯವರೆಗೆ ಪ್ರತಿದಿನ ಪೂರ್ಣಾವಧಿ ಶಾಲೆ ನಡೆಸಲು ಕ್ರಮಕೈಗೊಳ್ಳಲಾಗಿದೆ. ಇದಕ್ಕಾಗಿ ಎಸ್ಓಪಿ ಹಾಗೂ ತರಗತಿಗಳ ವೇಳಾಪಟ್ಟಿಯನ್ನು ಶಿಕ್ಷಣ ಇಲಾಖೆ ಪ್ರಕಟಿಸಿದೆ.
ಬೆಂಗಳೂರು ನಗರ ಬಿಬಿಎಂಪಿಯಲ್ಲಿ ಹಾಗೂ ಕೇರಳ ರಾಜ್ಯದ ಗಡಿಗೆ ಹೊಂದಿಕೊಂಡ ಪ್ರದೇಶಗಳಲ್ಲಿ ಆರರಿಂದ ಏಳನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಗಮ ಕಾರ್ಯಕ್ರಮ ಮುಂದುವರೆಯಲಿದೆ. 8ನೇ ತರಗತಿಗೆ ಮಾತ್ರ ಪ್ರತಿ ದಿನ ಪೂರ್ಣಾವಧಿ ತರಗತಿಯನ್ನು ಪ್ರಾರಂಭಿಸಲಾಗುತ್ತೆ. ಕೇರಳ ರಾಜ್ಯದ ಗಡಿ ಹೊಂದಿಕೊಂಡ ಜಿಲ್ಲೆಗಳ ಜಿಲ್ಲಾಡಳಿತಗಳು ಗಡಿ ಹೊಂದಿಕೊಂಡಿರುವ ಪ್ರದೇಶಗಳನ್ನು ಗುರುತಿಸಿ ತೀರ್ಮಾನಿಸಬಹುದು.
ರಾಜ್ಯದಲ್ಲಿನ ಆಯ್ದ ಶಾಲೆಗಳಲ್ಲಿ ಹಾಸ್ಟೆಲ್ಗಳಲ್ಲಿ ರ್ಯಾಂಡಮ್ ಆಗಿ ವಿದ್ಯಾರ್ಥಿ ಶಿಕ್ಷಕರ ಮತ್ತು ಸಿಬ್ಬಂದಿ ಪರೀಕ್ಷೆಗಳನ್ನು ಆರೋಗ್ಯ ಇಲಾಖೆಯಿಂದ ನಡೆಸಲಾಗುತ್ತದೆ. ಕೇರಳ ರಾಜ್ಯದಿಂದ ಬರುವ ಮಕ್ಕಳು, ಶಿಕ್ಷಕರು ಹಾಗೂ ಸಿಬ್ಬಂದಿಗೆ ಕೋವಿಡ್ ಪರೀಕ್ಷೆ ಕಡ್ಡಾಯ ಮಾಡಲಾಗಿದೆ. ಪೂರ್ಣಪ್ರಮಾಣದಲ್ಲಿ ಆರರಿಂದ ಎಂಟನೇ ತರಗತಿ ನಡೆಸುವುದರಿಂದ ಮನೆಯಿಂದಲೇ ಮಧ್ಯಾಹ್ನದ ಊಟ ತರುವಂತೆ ಸೂಚನೆ ನೀಡಲಾಗಿದೆ.
ಮಕ್ಕಳು ಶಾಲೆಗೆ ವಿದ್ಯಾಗಮ ಕಾರ್ಯಕ್ರಮಕ್ಕೆ ಹಾಜರಾಗುವಾಗ ಪೋಷಕರ ಅನುಮತಿ ಪತ್ರ ತರುವುದು ಕಡ್ಡಾಯ. ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯವಲ್ಲ, ಶಾಲೆಗೆ ಹಾಜರಾಗಲು ಬಯಸಿರುವ ವಿದ್ಯಾರ್ಥಿಗಳಿಗೆ ಈಗ ಅನುಸರಿಸುತ್ತಿರುವ, ಆನ್ಲೈನ್ ಇತರೆ ಪರ್ಯಾಯ ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಹೋಗುವಂತೆ ಸೂಚಿಸಲಾಗಿದೆ.
ತರಗತಿಗಳನ್ನು ಪೂರ್ಣ ಪ್ರಮಾಣದಲ್ಲಿ ನಡೆಸಲು ಶಾಲಾ ಹಂತದಲ್ಲಿ ಕೊಠಡಿಗಳ ಲಭ್ಯತೆ, ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಶಿಕ್ಷಕರ ಸಂಖ್ಯೆಯನ್ನು ಆಧರಿಸಿ ಎಸ್ಓಪಿ ಪಾಲನೆಗೋಸ್ಕರ ವೇಳಾಪಟ್ಟಿಯನ್ನು ಪರಿಷ್ಕರಿಸಿ ತರಗತಿಯನ್ನ ನಡೆಸಬಹುದಾಗಿದೆ ಎಂದು ಇಲಾಖೆ ತಿಳಿಸಿದೆ.