ಬೆಂಗಳೂರು: ಸಾರ್ವಜನಿಕ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುವ ವೇಳೆ ಕೊರೊನಾ ವೈರಸ್ ಪೊಲೀಸ್ ಸಿಬ್ಬಂದಿಗೆ ಅತಿ ಹೆಚ್ಚು ಹರಡುವ ಸಾಧ್ಯತೆ ಹಿನ್ನೆಲೆಯಲ್ಲಿ 55 ವರ್ಷ ಮೇಲ್ಪಟ್ಟ ಪೊಲೀಸ್ ಸಿಬ್ಬಂದಿ ಸಾರ್ವಜನಿಕರು ಹೆಚ್ಚಿರುವ ಸ್ಥಳಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸದಂತೆ ಡಿಜಿ ಹಾಗೂ ಐಜಿಪಿ ಪ್ರವೀಣ್ ಸೂದ್ ಆದೇಶ ಹೊರಡಿಸಿದ್ದಾರೆ.
ಮಧುಮೇಹ, ಬಿಪಿ, ಅಸ್ತಮಾ, ಕಿಡ್ನಿ ಹಾಗೂ ಯಕೃತ್ ಸಮಸ್ಯೆ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಸಿಬ್ಬಂದಿಗೆ ಠಾಣೆಯೊಳಗೆ ಕರ್ತವ್ಯಕ್ಕೆ ನಿಯೋಜಿಸಲು ಸೂಚನೆ ನೀಡಿದ್ದಾರೆ. ಕೋವಿಡ್-19 ವೈರಸ್ ಸೋಂಕಿನಿಂದ ಪೊಲೀಸ್ ಇಲಾಖೆಯು ಮಾನವ ಸಂಪನ್ಮೂಲವನ್ನು ರಕ್ಷಿಸುವ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಿದೆ.
ದಿನೇದಿನೆ ರಾಜ್ಯದಲ್ಲಿ ಉಲ್ಬಣಗೊಳ್ಳುತ್ತಿರುವ ಕೊರೊನಾ ವೈರಸ್ನಿಂದಾಗಿ ಹತ್ತಾರು ಜನ ಸೋಂಕಿಗೆ ಒಳಗಾಗುತ್ತಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಸಾವಿರಾರು ಪೊಲೀಸರು 55 ವರ್ಷಕ್ಕಿಂತ ಮೇಲ್ಪಟ್ಪವರು ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಅವರನ್ನು ಸೋಂಕಿನಿಂದ ರಕ್ಷಿಸುವ ಉದ್ದೇಶದಿಂದ ಡಿಜಿ ಅವರು ಈ ಆದೇಶ ಹೊರಡಿಸಿದ್ದಾರೆ.