ಬೆಂಗಳೂರು: ನೈಸ್ಗೆ ಹೆಚ್ಚುವರಿಯಾಗಿ ನೀಡಿರುವ 543 ಎಕರೆ ಭೂಮಿಯನ್ನು ವಾಪಸ್ ಪಡೆಯಲಾಗುವುದು. ಅವರು 1,600 ಎಕರೆಯಷ್ಟು ಭೂಮಿಯನ್ನು ವಶಪಡಿಸಿಕೊಂಡು ಟೌನ್ ಶಿಪ್ ಮಾಡುತ್ತಿದ್ದಾರೆ. ಇದು ಕಾನೂನುಬಾಹಿರ ಆಗಿದೆ. ಒಂದು ಎಕರೆಗೆ 1 ಕೋಟಿ 60 ರೂ. ಜೊತೆಗೆ 60x40 ಸೈಟ್ ನೀಡಬೇಕು. ಭೂಮಿ ವಶಪಡಿಸಿಕೊಂಡು 20 ವರ್ಷ ಆಗಿದೆ. ಇದರಿಂದ ರೈತರಿಗೆ ಅನ್ಯಾಯ ಆಗಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು.
ವಿಧಾನಸೌಧದಲ್ಲಿ ಇಂದು ನಡೆದ ಸಚಿವ ಸಂಪುಟ ಉಪ ಸಮಿತಿ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಹಿಂದೆ ನಿಗದಿಯಾದ 40 ಲಕ್ಷ ಪರಿಹಾರಕ್ಕೆ ರೈತರು ಒಪ್ಪಿಲ್ಲ. ಇದಕ್ಕೆ ನೈಸ್ ಸಂಸ್ಥೆ ಒಪ್ಪದಿದ್ದರೆ ಭೂಮಿಯನ್ನು ರೈತರಿಗೆ ವಾಪಸ್ ನೀಡಲಾಗುವುದು. ಇಲ್ಲವೆ ಸರ್ಕಾರದ ವಶಕ್ಕೆ ಪಡೆಯಲಾಗುವುದು ಎಂದು ಹೇಳಿದರು.
ಹೆಚ್ಡಿಕೆಗೆ ತಿರುಗೇಟು ನೀಡಿದ ಸೋಮಶೇಖರ್: ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಬಮೂಲ್ ನೇಮಕಾತಿಯಲ್ಲಿ ಎಲ್ಲ ಹದಿನಾಲ್ಕು ಯೂನಿಯನ್ಗಳಲ್ಲೂ ಅಕ್ರಮ ನಡೆದಿದೆ ಎಂದು ದೂರು ಕೊಟ್ಟಿದ್ದಾರೆ. ಎಲ್ಲ ಕಡೆ ಅಕ್ರಮದ ದೂರು ನೀಡಿದರೆ ಹೇಗೆ ? ಎಂದು ಹೆಚ್ಡಿಕೆಗೆ ತಿರುಗೇಟು ನೀಡಿದರು. ಕುಮಾರಸ್ವಾಮಿ ಅವರ ಸಹೋದರ ಹೆಚ್.ಡಿ. ರೇವಣ್ಣ ಕೆಎಂಎಫ್ ಅಧ್ಯಕ್ಷ ಆಗಿರಲಿಲ್ವಾ?. ಬಂಡೆಪ್ಪ ಕಾಶೆಂಪೂರ್ ಆಗ ಸಹಕಾರ ಸಚಿವರಾಗಿರಲ್ವಾ?. ಆರೋಪ ಮಾಡಬೇಕಾದರೆ ದಾಖಲೆ ಇಟ್ಟು ಮಾಡಬೇಕು. ಬಹುಶಃ ಇವರು ಸಿಎಂ ಆದ ಅವಧಿಯಲ್ಲಿ ಅಕ್ರಮ ಆಗಿದೆ ಅನಿಸುತ್ತದೆ. ಹೀಗಾಗಿ ಆರೋಪ ಮಾಡಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಕೋವಿಡ್ 4ನೇ ಅಲೆ ಭೀತಿ: ರಾಜ್ಯದಲ್ಲಿ ಮಾಸ್ಕ್ ಕಡ್ಡಾಯ.. ಸರ್ಕಾರದಿಂದ ಹೊಸ ಮಾರ್ಗಸೂಚಿ
ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಪೋಲಿಸ್ ನೋಟಿಸ್ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಸಚಿವರು, ಸಿಎಂ ಬಸವರಾಜ್ ಬೊಮ್ಮಾಯಿ ಇದನ್ನು ತುಂಬಾ ಗಂಭೀರವಾಗಿ ಪರಿಗಣಿಸಿದ್ದಾರೆ. ಯಾರು ಎಷ್ಟೇ ದೊಡ್ಡ ಮನುಷ್ಯರಾಗಿರಲಿ ಬಂಧಿಸುವಂತೆ ಸೂಚನೆ ನೀಡಿದ್ದಾರೆ. ಯಾರಿಗೂ ಅನ್ಯಾಯವಾಗಬಾರದು. ಪ್ರಿಯಾಂಕ್ ಖರ್ಗೆ ಸಿಡಿ ಬಿಡುಗಡೆ ಮಾಡಿದ್ದರು. ಹಾಗಾಗಿ ಪೊಲೀಸರು ಇದು ಎಲ್ಲಿಂದ ಬಂತು ಅಂತಾ ಕೇಳಿದ್ದಾರೆ. ಇದಕ್ಕೆ ಪ್ರಿಯಾಂಕ್ ಖರ್ಗೆ ಸಹಕಾರ ಕೊಡಬೇಕು. ಆಗ ಇದಕ್ಕೆ ಪರಿಹಾರ ಸಿಕ್ಕಂತಾಗಲಿದೆ ಎಂದು ಹೇಳಿದರು.