ಇಂಡಿಯಾ v/s ಇಂಗ್ಲೆಂಡ್
ಇದು ಸ್ಯಾಂಡಲ್ವುಡ್ ಮೇಷ್ಟ್ರು ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಸಿನಿಮಾ. ನಾಗತಿಹಳ್ಳಿ ಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿ ವೈ.ಎನ್. ಶಂಕರೇಗೌಡ ಹಾಗೂ ಸ್ನೇಹಿತರು ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸಿದ್ದಾರೆ. ತಮ್ಮ ಸಿನಿಮಾಗಳನ್ನು ಹೆಚ್ಚಾಗಿ ವಿದೇಶದಲ್ಲಿ ಚಿತ್ರೀಕರಣ ಮಾಡುವ ಮೇಷ್ಟ್ರು, ಈ ಬಾರಿ ಕೂಡಾ ಬಹುತೇಕ ಚಿತ್ರೀಕರಣವನ್ನು ಇಂಗ್ಲೆಂಡ್ನಲ್ಲಿ ಮಾಡಿದ್ದಾರೆ. ಈ ಬಾರಿ ತಮ್ಮ ಪುತ್ರಿ ಕನಸು ಬರೆದ ಕಥೆಯನ್ನು ಇಟ್ಟುಕೊಂಡು ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಸುಮಾರು 20 ಮಂದಿ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.
ಇನ್ನು ವಷಿಷ್ಠ ಸಿಂಹ ಈ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸಿದ್ದಾರೆ. ಮಾನ್ವಿತಾ ಕಾಮತ್ ವಸಿಷ್ಠಗೆ ಜೊತೆಯಾಗಿದ್ದಾರೆ. ಸತ್ಯ ಹೆಗ್ಡೆ ಹಾಗೂ ಎ.ವಿ. ಕೃಷ್ಣಕುಮಾರ್ ಚಿತ್ರಕ್ಕೆ ಛಾಯಾಗ್ರಹಣ ಒದಗಿಸಿದ್ದಾರೆ. ಶ್ರೀಕಾಂತ್ ಸಂಕಲನ, ಮೋಹನ್ ನೃತ್ಯ, ರವಿವರ್ಮ ಹಾಗೂ ಡಿಫರೆಂಟ್ ಡ್ಯಾನಿ ಸಾಹಸ ಈ ಚಿತ್ರಕ್ಕಿದೆ. ಚಿತ್ರವನ್ನು ನಾಗತಿಹಳ್ಳಿ ಚಂದ್ರಶೇಖರ್ ವಿತರಣೆ ಮಾಡುತ್ತಿರುವುದು ವಿಶೇಷ. ಸುಮಲತಾ ಅಂಬರೀಶ್, ಅನಂತ್ ನಾಗ್, ಪ್ರಕಾಶ್ ಬೆಳವಾಡಿ, ಸಾಧು ಕೋಕಿಲ, ಗೋಪಾಲ ಕುಲಕರ್ಣಿ, ಶಿವಮಣಿ, ಸಿರಿ ಹಂಪಾಪುರ, ಮಿಚಿಲ್ ಆಸ್ಟಿನ್, ಲೇಕ್ಸ್ ಲಮ್ಪ್ರೆ ಹಾಗೂ ಇತರರು ತಾರಾಗಣದಲ್ಲಿದ್ದಾರೆ.
ಖಾಕಿ
ಇದೊಂದು ಸಾಹಸಭರಿತ ಸಿನಿಮಾ ಅಷ್ಟೇ ಅಲ್ಲದೆ ಸಾಮಾಜಿಕ ಕಳಕಳಿಯುಳ್ಳ ಚಿತ್ರ. ತರುಣ್ ಟಾಕೀಸ್ ಅಡಿ ತರುಣ್ ಶಿವಪ್ಪ ಹಾಗೂ ಮಾನಸ ತರುಣ್ ನಿರ್ಮಾಣ ಮಾಡಿರುವ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಹಾಗೂ ತಾನ್ಯಾ ಹೊಪ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ನವೀನ್ ರೆಡ್ಡಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ, ಋತ್ವಿಕ್ ಮುರಳೀಧರ್ ಸಂಗೀತ, ಬಾಲ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ವಿನೋದ್ ಸಾಹಸ, ಭೂಷಣ್, ಧನು ನೃತ್ಯ ಸಂಯೋಜನೆ ಮಾಡಿದ್ದಾರೆ. ದೇವ್ ಗಿಲ್, ಶಿವಮಣಿ, ಶಶಿ, ಸುಧಾ ಬೆಳವಾಡಿ, ನವ್ಯಾ ಹಾಗೂ ಇತರರು ತಾರಾಗಣದಲ್ಲಿದ್ದಾರೆ.
![Khaki](https://etvbharatimages.akamaized.net/etvbharat/prod-images/5807727_khaki.jpg)
ನಾವೆಲ್ರೂ ಹಾಫ್ ಬಾಯಿಲ್ಡ್
ಅನುಗ್ರಹ ಸಿನಿಮಾಸ್ ಬ್ಯಾನರ್ ಅಡಿ ಕೆ. ಅಮೀರ್ ಅಹ್ಮದ್ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ಯುವಕರು ದಾರಿ ತಪ್ಪಿ ಮಾಡಿಕೊಳ್ಳುವ ಎಡವಟ್ಟನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ಇದು ಹಳ್ಳಿ ಸೊಗಡಿನ ನಾಲ್ವರು ಹುಡುಗರ ಕಥೆ. ಸುನಿಲ್ ಕುಮಾರ್, ಹಂಪೇಶ್ ಅರಸೂರ್, ಮಂಜು ಬದ್ರಿ ಹಾಗೂ ದೀಪಕ್ ಈ ಸಿನಿಮಾದಲ್ಲಿ ಅಭಿನಯಿಸಿದ್ದು, ಈ ಹೊಸ ಪ್ರತಿಭೆಗಳ ಚಿತ್ರಕ್ಕೆ, ಹಾಸ್ಯ ನಟ ತಬಲಾ ನಾಣಿ ಡೈಲಾಗ್ ಬರೆದಿರುವುದು ವಿಶೇಷ. ತಮಿಳು, ತೆಲುಗು, ಕನ್ನಡ ಸಿನಿಮಾಗಳಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿರುವ ಬಿ. ಶಿವರಾಜ್ ವೆಂಕಟಾಚ್ಚ ಚಿತ್ರಕ್ಕೆ ಕಥೆ ಬರೆದು ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ವಿಜೇತ್ ಕೃಷ್ಣ ಸಂಗೀತ, ಕುಶೇಂದ್ರ ರೆಡ್ಡಿ ಛಾಯಾಗ್ರಹಣ, ನಾಗೇಂದ್ರ ಕೆ. ಉಜ್ಜಣಿ, ಶ್ರೀಧರ್ ವೈ.ಎಸ್. ಸಂಕಲನ, ಪ್ರೇಮ್ ರಕ್ಷಿತ್ ನೃತ್ಯ ನಿರ್ದೇಶನವಿದೆ.
ಸುನಿಲ್ ಕುಮಾರ್, ದೀಪಕ್, ಮಂಜು ಬದ್ರಿ, ಹಂಪೇಶ್ ಅರಸೂರ್, ಮಾತಂಗಿ ಪ್ರಸನ್ನ, ವಿನ್ಯಾ ಶೆಟ್ಟಿ, ತಬಲಾ ನಾಣಿ, ದೇವೇಂದ್ರ ಕಾಪಿಕಡ್, ಪವನ್ ಹಾಗೂ ಇತರರು ತಾರಾಗಣದಲ್ಲಿದ್ದಾರೆ.
ಗಡಿನಾಡು
ಬೆಳಗಾವಿ ಹುಡುಗ ಹಾಗೂ ಮರಾಠಿ ಹುಡುಗಿಯ ನಡುವೆ ನಡೆಯುವ ಪ್ರೇಮಕಥೆ ಇದು. ನಾಗ್ ಹುಣಸೋಡ್ ನಿರ್ದೇಶನದ ಈ ಸಿನಿಮಾವನ್ನು ವಸಂತ್ ಮುರಾರಿ ದಳವಾಯಿ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಅಥಣಿ, ಗೋಕಾಕ್, ಬೆಳಗಾವಿ ಹಾಗೂ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಪ್ರಭು ಸೂರ್ಯ ಹಾಗೂ ಸಂಚಿತಾ ಪಡುಕೋಣೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಐದು ಸಾಹಸ ಸನ್ನಿವೇಶಗಳು ಹಾಗೂ ಐದು ಹಾಡುಗಳಿವೆ. ಚಿತ್ರದ ಹಾಡುಗಳಿಗೆ ಎಲ್ವಿನ್ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಕನ್ನಡದ ಬಗ್ಗೆ ಇರುವ ಹಾಡೊಂದನ್ನು ರಘು ದೀಕ್ಷಿತ್ ಹಾಡಿದ್ದಾರೆ.
ಸಂತೋಷ್ ನಾಯಕ್ ಹಾಗೂ ನಾಗ್ ಹುಣಸೋಡ್ ಗೀತ ರಚನೆ, ಗೌರಿ ವೆಂಕಟೇಶ್ ಹಾಗೂ ರವಿ ಸುವರ್ಣ ಛಾಯಾಗ್ರಹಣ, ಥ್ರಿಲ್ಲರ್ ಮಂಜು, ಡಿಫರೆಂಟ್ ಡ್ಯಾನಿ ಸಾಹಸ, ವೆಂಕಿ ಸಂಕಲನ, ಧನಂಜಯ್ ಹರಿಕೃಷ್ಣ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಅಕ್ಷಯ್ ಫಿಲ್ಮ್ಸ್ ಬ್ಯಾನರ್ ಅಡಿ ಚಿತ್ರವನ್ನು ನಿರ್ಮಿಸಲಾಗಿದೆ. ಹಿರಿಯ ನಟ ಚರಣ್ ರಾಜ್, ಶೋಭರಾಜ್, ದೀಪಕ್ ಶೆಟ್ಟಿ, ರಘು ರಾಜ್, ರಘು ಸೀರುಂಡೆ, ಮಮತ, ಪುಷ್ಪ ಹಾಗೂ ಇತರರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.
ನಾನು ಮತ್ತು ಗುಂಡ
ಮನುಷ್ಯ ಹಾಗೂ ನಾಯಿಯ ಬಾಂಧವ್ಯದ ಕಥೆ ಹೊಂದಿರುವ 'ನಾನು ಮತ್ತು ಗುಂಡ' ಇದೇ ಶುಕ್ರವಾರ ಬಿಡುಗಡೆಯಾಗಲಿದೆ. ನಿಯತ್ತಿನ ನಾಯಿಯ ಬಗ್ಗೆ ತಿಳಿಯಬೇಕೆಂದರೆ ನೀವು ಈ ಚಿತ್ರವನ್ನು ನೋಡಲೇಬೇಕು. ಪೊಯಮ್ ಪ್ರೊಡಕ್ಷನ್ ಬ್ಯಾನರ್ ಅಡಿ ರಘು ಹಾಸನ್ ಚಿತ್ರವನ್ನು ನಿರ್ಮಿಸಿದ್ದರೆ, ಶ್ರೀನಿವಾಸ್ ತಿಮ್ಮಯ್ಯ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಹಾಸನ, ಚನ್ನರಾಯಪಟ್ಟಣ, ಹಿರಿಸಾವೆ, ಶ್ರವಣಬೆಳಗೊಳ, ಕಾಂತರಾಜಪುರ, ಶೆಟ್ಟರಹಳ್ಳಿ ಚರ್ಚ್, ಆದಿ ಚುಂಚನಗಿರಿ, ಯಡಿಯೂರು, ಅಕ್ಕನಹಳ್ಳಿ, ಸಕಲೇಶಪುರ ಹಾಗೂ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ.
![Nanu mattu Gunda](https://etvbharatimages.akamaized.net/etvbharat/prod-images/5807727_nanu.jpg)
ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್ ಕೆ.ಆರ್. ಪೇಟೆ, ಸಂಯುಕ್ತ ಹೊರನಾಡು ಪ್ರಮುಖ ಪಾತ್ರದಲ್ಲಿದ್ದಾರೆ. ಗೋವಿಂದೇ ಗೌಡ, ರಾಕ್ಲೈನ್ ಸುಧಾಕರ್, ಸಿಂಬ ಎಂಬ ನಾಯಿ, ವಿದ್ಯಾಧರ,ಮಮತ, ಪ್ರಶ್ವಿತ, ಅಡ್ಡ ರಮೇಶ್, ಜ್ಯೋತಿ ಮರೂರ್, ಚಂದ್ರಿಕ ತಾರಾಗಣದಲ್ಲಿ ಇದ್ದಾರೆ. ವಿವೇಕಾನಂದ ಅವರ ಕಥೆಗೆ ರಘು ಹಾಸನ್, ಶ್ರೀನಿವಾಸ್ ತಿಮ್ಮಯ್ಯ, ವಿವೇಕಾನಂದ ಚಿತ್ರಕಥೆ ರಚಿಸಿದ್ದಾರೆ, ಶರತ್ ಚಕ್ರವರ್ತಿ ಸಂಭಾಷಣೆ, ಕೆ.ಎಂ. ಪ್ರಕಾಶ್ ಸಂಕಲನ, ಕೃಷ್ಣಮೂರ್ತಿ ಮೇಕಪ್ , ಕೆ . ಗಣೇಶ್ ಅವರ ವಸ್ತ್ರ ವಿನ್ಯಾಸ ಈ ಚಿತ್ರಕ್ಕಿದೆ.