ಬೆಂಗಳೂರು: ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಲಿಮಿಟೆಡ್ ವತಿಯಿಂದ ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ಇಂದು 5 ಕೋಟಿ ರೂ.ಗಳ ದೇಣಿಗೆಯ ಚೆಕ್ ಅನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಹಸ್ತಾಂತರ ಮಾಡಲಾಯಿತು.

ಸಹಾಕಾರ ಸಚಿವ ಎಸ್.ಟಿ.ಸೋಮಶೇಖರ್, ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿ ಪ್ರಕಾಶ್ ಹಾಗೂ ಪದಾಧಿಕಾರಿಗಳು ಸಿಎಂ ಅಧಿಕೃತ ನಿವಾಸ ಕಾವೇರಿಗೆ ಆಗಮಿಸಿ, ಚೆಕ್ ಹಸ್ತಾಂತರಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಹಕಾರ ಸಚಿವ ಎಸ್.ಟಿ ಸೋಮಶೇಖರ್, ಮೈಸೂರಿನಲ್ಲಿ ಆಕ್ಸಿಜನ್ ಸಮಸ್ಯೆ ಇಲ್ಲ. ಚಾಮರಾಜನಗರ, ಮೈಸೂರು, ಮಂಡ್ಯಗೆ ಪ್ರತ್ಯೇಕವಾಗಿ ಆಕ್ಸಿಜನ್ ವ್ಯವಸ್ಥೆ ಮಾಡಿದ್ದೇವೆ. ಮೈಸೂರಿನಲ್ಲಿ ಶೇ 65 ರಷ್ಟು ಆಗಿದೆ. ಕೆ.ಆರ್ ನಗರ ಶೇ 85 ರಷ್ಟು ಲಸಿಕೆ ಆಗಿದೆ. ಲಸಿಕೆ ಲಭ್ಯತೆ ಮೇಲೆ ಎರಡನೇ ಡೋಸ್ ಲಸಿಕೆ ಕೊಡುತ್ತೇವೆ. ದೇಶದಲ್ಲೆ ಮೈಸೂರು ಲಸಿಕೆಯಲ್ಲಿ ನಂಬರ್ ಒನ್ ಸಾಧನೆ ಮಾಡಿದೆ ಎಂದರು.
ಮೈಸೂರಿನಲ್ಲಿ ಆಕ್ಸಿಜನ್ ಸಮಸ್ಯೆಯಿಲ್ಲದಿದ್ದರೂ ಮಾತ್ರೆಗಳ ಕೊರತೆ ಇದೆ. ಕೆ.ಆರ್.ಆಸ್ಪತ್ರೆ ಡೀನ್ ರಿಟೈರ್ಡ್ ಆಗ್ತಾರೆ. ಅವರ ಜಾಗಕ್ಕೆ ಬೇರೆಯವರ ನೇಮಕಕ್ಕೆ ಮನವಿ ಮಾಡಿದ್ದೇನೆ. ಲಸಿಕೆಯಲ್ಲಿ ಸಾಧನೆ ಮಾಡಿದ್ದರೂ ಕೂಡ ಮೈಸೂರಿನಲ್ಲಿ ಲಸಿಕೆ ಕೊರತೆ ಈಗ ಸೃಷ್ಟಿಯಾಗಿದೆ. ಕೂಡಲೇ ಲಸಿಕೆ ಪೂರೈಕೆ ಮಾಡುವ ಬಗ್ಗೆ ಸಿಎಂಗೆ ಮನವಿ ಮಾಡಿದ್ದೇನೆ ಎಂದರು.

5 ಕೆ.ಜಿ ಅಕ್ಕಿಯ 1 ಕ್ವಿಂಟಾಲ್ ಪ್ಯಾಕೇಟ್ ಸರ್ಕಾರಕ್ಕೆ ಹಸ್ತಾಂತರ ಮಾಡಲಾಗಿದೆ. ಸಿಎಂ ಪರಿಹಾರ ನಿಧಿಗೆ 5 ಕೋಟಿ ನೀಡಿದ್ದೇವೆ. 1 ಲಕ್ಷ ಎನ್ 95 ಮಾಸ್ಕ್ ಸರ್ಕಾರಕ್ಕೆ ಕೊಟ್ಟಿದ್ದೇವೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.