ಬೆಂಗಳೂರು: ಬಿಎಂಟಿಸಿ ಬಸ್ನಲ್ಲಿ ಟಿಕೆಟ್ ಪಡೆಯದೇ ಬಿಟ್ಟಿಯಾಗಿ ಓಡಾಡುತ್ತಿದ್ದ ಪ್ರಯಾಣಿಕರಿಗೆ ಬಿಎಂಟಿಸಿ ಸರಿಯಾದ ಪಾಠ ಕಲಿಸಿದೆ. ಏಪ್ರಿಲ್ ತಿಂಗಳಿನಲ್ಲಿ ಟಿಕೆಟ್ ಪಡೆಯದೆ ಓಡಾಡುವ ಮತ್ತು ಸಂಸ್ಥೆಯ ಸಾರಿಗೆ ಆದಾಯದ ಸೋರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಟಿಕೆಟ್ ರಹಿತ ಪ್ರಯಾಣ ಮಾಡುವ ಪ್ಯಾಸೆಂಜರ್ಗಳನ್ನು ನಗರದಾದ್ಯಂತ ಸಂಸ್ಥೆಯ ತನಿಖಾ ತಂಡಗಳ ಅಧಿಕಾರಿಗಳು ತಪಾಸಣೆ ನಡೆಸಿದ್ದರು.
ಈ ವೇಳೆ ಒಟ್ಟು 22,395 ಟ್ರಿಪ್‌ಗಳನ್ನು ಚೆಕ್ ಮಾಡಿ 2671 ಟಿಕೆಟ್ ರಹಿತ ಪ್ರಯಾಣಿಕರನ್ನು ಪತ್ತೆ ಹಚ್ಚಲಾಗಿದೆ. ಅವರಿಂದ ಒಟ್ಟು ರೂ. 4,38,950/- ದಂಡ ವಸೂಲಿ ಮಾಡಿ ಜೊತೆಗೆ ಸಂಸ್ಥೆಯ ನಿರ್ವಾಹಕರ ವಿರುದ್ಧ 1426 ಪ್ರಕರಣಗಳನ್ನು ದಾಖಲಿಸಲಾಗಿದೆ.
ಮಹಿಳಾ ಪ್ರಯಾಣಿಕರಿಗೆಂದೇ ಮೀಸಲಾಗಿರುವ ಆಸನಗಳಲ್ಲಿ ಕುಳಿತು ಪ್ರಯಾಣಿಸಿರುವ 157 ಪುರುಷ ಪ್ರಯಾಣಿಕರಿಂದ ಒಟ್ಟು ರೂ. 15,700/-ಅನ್ನು ಮೋಟಾರು ವಾಹನ ಕಾಯ್ದೆ 1988ರ ಕಲಂ 177 ಮತ್ತು 94 ರ ಪ್ರಕಾರ ದಂಡ ವಿಧಿಸಲಾಗಿದೆ. ಒಟ್ಟಾರೆ ಏಪ್ರಿಲ್ ತಿಂಗಳಲ್ಲಿ 2828 ಪ್ರಯಾಣಿಕರಿಂದ ಒಟ್ಟು ರೂ.4,54,650/ ದಂಡವನ್ನು ವಸೂಲಿ ಮಾಡಲಾಗಿದೆ.
ಪ್ರಯಾಣಿಕರು ಸಂಸ್ಥೆಯ ವಾಹನಗಳಲ್ಲಿ ಪ್ರಯಾಣಿಸುವಾಗ ಅಧಿಕೃತ ಟಿಕೆಟ್/ದಿನದ ಪಾಸು/ಮಾಸಿಕ ಪಾಸುಗಳನ್ನು ಹೊಂದಿ ಪ್ರಯಾಣಿಸುವಂತೆ ಸೂಚನೆ ನೀಡಲಾಗಿದೆ. ಇದರಿಂದ ಅನಗತ್ಯ ದಂಡ ಕಟ್ಟುವುದನ್ನು ತಡೆಯಬಹುದಾಗಿದೆ ಹಾಗೂ ಇಂತಹ ಪ್ರವೃತ್ತಿಯಿಂದ ಸಂಸ್ಥೆಯು ಉತ್ತಮ ಸೇವೆಯನ್ನು ಪ್ರಯಾಣಿಕರಿಗೆ ನೀಡಲು ಸಹಾಯವಾಗುತ್ತದೆ. ಮಹಿಳಾ ಪ್ರಯಾಣಿಕರಿಗೆಂದೇ ಮೀಸಲಾಗಿರುವ ಆಸನಗಳಲ್ಲಿ ಪುರುಷ ಪ್ರಯಾಣಿಕರು ಆಸನಗಳನ್ನು ತೆರವು ಮಾಡಿಕೊಡುವ ಮೂಲಕ ಅವರಿಗೆ ಕುಳಿತುಕೊಳ್ಳಲು ಅವಕಾಶ ನೀಡಬೇಕೆಂದು ಕೋರಲಾಗಿದೆ.