ಬೆಂಗಳೂರು: ರಾಜಧಾನಿಯಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಬರೋಬ್ಬರಿ 445.03 ಕೋಟಿ ರೂಪಾಯಿ ನಷ್ಟವಾಗುವ ಜೊತೆಗೆ ಮೂಲಸೌಕರ್ಯಕ್ಕೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.
ಬೆಂಗಳೂರಿನಲ್ಲಿ ಮಳೆ ಹಾನಿ ಬಗ್ಗೆ ಕಂದಾಯ ಇಲಾಖೆಗೆ ಬಿಬಿಎಂಪಿ ನೀಡಿದ ವರದಿಯಲ್ಲಿ ಪೂರ್ವ ವಲಯದಲ್ಲಿ ಒಟ್ಟು ಹಾನಿ 37.53 ಕೋಟಿ ರೂಪಾಯಿ ನಷ್ಟ, ಹಾಳಾದ ರಸ್ತೆಯ ಉದ್ದ 83.46 ಕಿಮೀ ಹಾಗೂ ಮನೆಗಳು 1549 ಹಾನಿಯಾಗಿವೆ. ದಕ್ಷಿಣ ವಲಯದಲ್ಲಿ ಒಟ್ಟು 50 ಕೋಟಿ ನಷ್ಟವಾಗಿದೆ. ಹಾಳಾದ ರಸ್ತೆಯ ಉದ್ದ 56.45 ಕಿಮೀ ಎಂದು ಗುರುತಿಸಲಾಗಿದೆ. 88 ಮನೆ ಹಾನಿಯಾಗಿವೆ ಎನ್ನುವ ಅಂಶ ಹೊರಬಿದ್ದಿದೆ.
ಯಾವ ವಲಯದಲ್ಲಿ ಎಷ್ಟು ನಷ್ಟ?: ಬೊಮ್ಮನಹಳ್ಳಿ ವಲಯದಲ್ಲಿ ಒಟ್ಟು 15 ಕೋಟಿ ಹಾಗೂ 23 ಕಿಮೀ ರಸ್ತೆ, 340 ಮನೆಗಳಿಗೆ, ಮಹದೇವಪುರ ವಲಯದಲ್ಲಿ 331 ಕೋಟಿ ನಷ್ಟವಾಗಿದೆ. ರಾಜರಾಜೇಶ್ವರಿ ನಗರ ವಲಯದಲ್ಲಿ 10 ಕೋಟಿ, 39 ಕಿಮೀ ಉದ್ದ ರಸ್ತೆ ಹಾನಿಗೊಳಾಗಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಯಲಹಂಕ ವಲಯದಲ್ಲಿ 1.5 ಕೋಟಿ, 2.5 ಕಿಮೀ ಉದ್ದದ ರಸ್ತೆ, 342 ಮನೆಗಳು ಹಾನಿಯಾಗಿವೆ. ಒಟ್ಟಾರೆ 445.03 ಕೋಟಿ ನಷ್ಟವಾಗಿ, 204.41 ಕಿಮೀ ರಸ್ತೆ ಹಾಳಾಗಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ತಗ್ಗಿದ ಮಳೆಯ ಪ್ರಮಾಣ: ರೈನ್ ಬೋ ಲೇಔಟ್ ಸೇರಿದಂತೆ ಹಲವು ಬಡಾವಣೆಗಳು ಯಥಾಸ್ಥಿತಿಯತ್ತ