ಬೆಂಗಳೂರು: ರಾಜ್ಯದಲ್ಲಿ 42,062 ವಿದ್ಯಾರ್ಥಿಗಳು ಶಾಲೆ ಬಿಟ್ಟಿರುವುದು ಈವರೆಗೆ ನಡೆಸಿರುವ ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್ಗೆ ಮಾಹಿತಿ ನೀಡಿದೆ.
ರಾಜ್ಯದಲ್ಲಿ ಕಡ್ಡಾಯ ಶಿಕ್ಷಣ ಜಾರಿಗೊಳಿಸುವ ಹಿನ್ನೆಲೆಯಲ್ಲಿ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಪ್ರಕರಣದ ಅಮೈಕಸ್ ಕ್ಯೂರಿ ಆಗಿರುವ ಹಿರಿಯ ವಕೀಲ ಕೆ.ಎನ್ ಫಣೀಂದ್ರ ಅವರು ಈ ಮಾಹಿತಿ ನೀಡಿದರು.
ಹಿಂದಿನ ವಿಚಾರಣೆ ವೇಳೆ ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಗುರುತಿಸಲು ಮನೆ ಮನೆ ಸಮೀಕ್ಷೆ ನಡೆಸುವಂತೆ ಸರ್ಕಾರಕ್ಕೆ ನಿರ್ದೇಶಿಸಿತ್ತು. ಆ ಪ್ರಕಾರ ಸಮೀಕ್ಷೆ ನಡೆಸಿದ್ದರೂ ಅದಕ್ಕೆ ಅನುಸರಿಸಿದ ಮಾನದಂಡಗಳ ಕುರಿತು ವಿವರ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಮೀಕ್ಷೆ ವರದಿ ಹಾಗೂ ದಾಖಲೆಗಳನ್ನು ಅಮೈಕಸ್ ಕ್ಯೂರಿ ಹಾಗೂ ಇತರ ವಕೀಲರೊಂದಿಗೆ ಸಭೆ ನಡೆಸಿ ಪರಿಶೀಲಿಸಬೇಕು ಎಂದು ಕಳೆದ ಜೂನ್ 23ರಂದು ನಿರ್ದೇಶಿಸಿತ್ತು.
ಪೀಠದ ಸೂಚನೆ ಮೇರೆಗೆ ರಾಜ್ಯ ಪ್ರಾಥಮಿಕ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ಇದೇ ಜುಲೈ 8ರಂದು ನಡೆದ ಸಭೆಯಲ್ಲಿ ವಿವರಗಳನ್ನು ಪರಿಶೀಲಿಸಲಾಗಿತ್ತು. ಸಭೆಯ ವರದಿ ಪ್ರಕಾರ ರಾಜ್ಯದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಲು ಮನೆ ಮನೆ ಸರ್ವೆ ನಡೆಸಲಾಗಿದೆ. ನಗರ ಪ್ರದೇಶಗಳಲ್ಲಿ 8,718 ಮಕ್ಕಳು ಶಾಲೆಗೆ ಹೋಗುತ್ತಿಲ್ಲ. ಗ್ರಾಮೀಣ ಭಾಗದಲ್ಲಿ 33,344 ಮಕ್ಕಳು ಶಾಲೆಗೆ ಹೋಗುತ್ತಿಲ್ಲ. ಇವರಲ್ಲಿ 9,716 ಮಕ್ಕಳು ಶಾಲೆಗೆ ದಾಖಲಾತಿಯನ್ನೇ ಪಡೆದಿಲ್ಲ ಎಂದು ವಿವರಿಸಲಾಗಿದೆ.
ಬೆಂಗಳೂರಿನಲ್ಲಿ 25 ಲಕ್ಷ ಕುಟುಂಬಗಳು ವಾಸವಾಗಿವೆ. ಇಲ್ಲಿ ಮನೆ ಮನೆ ಸರ್ವೆ ನಡೆಸಲು 4 ಸಾವಿರ ಸಿಬ್ಬಂದಿ ಅಗತ್ಯವಿದೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ, ಕೋವಿಡ್ ಸಾಂಕ್ರಾಮಿಕ ಕಾರಣಕ್ಕಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಸಲು ಸಾಧ್ಯವಾಗಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.
ವರದಿ ಪರಿಶೀಲಿಸಿದ ಪೀಠ, ಸರ್ವೇ ನಡೆಸುವ ಸಂಬಂಧ ಉತ್ತರಿಸಲು ಬಿಬಿಎಂಪಿಗೆ ನೋಟಿಸ್ ಜಾರಿ ಮಾಡಿದೆ. ಜೊತೆಗೆ ಕೂಡಲೇ ಸರ್ವೆ ನಡೆಸುವಂತೆ ಪಾಲಿಕೆಗೆ ನಿರ್ದೇಶಿಸುವಂತೆ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಸೂಚಿಸಿದೆ.