ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕು ಅಟ್ಟಹಾಸ ಮೆರೆಯುತ್ತಿದ್ದು, ಇಂದು ಒಂದೇ ದಿನ ನಾಲ್ಕು ಪೊಲೀಸ್ ಠಾಣೆಗಳನ್ನು ಸೀಲ್ ಡೌನ್ ಮಾಡಲಾಗಿದೆ.
ಹಲಸೂರು ಗೇಟ್ ಠಾಣೆ ಸೀಲ್ ಡೌನ್: ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಹೆಡ್ ಕಾನ್ಸ್‌ಟೇಬಲ್ ಗೆ ಸೋಂಕು ಪತ್ತೆಯಾಗಿದ್ದು, ಸದ್ಯ ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ. ಹಾಗೂ ಹೆಡ್ ಕಾನ್ಸ್‌ಟೇಬಲ್ ಜೊತೆ ಸಂಪರ್ಕದಲ್ಲಿದ್ದ ಸಿಬ್ಬಂದಿಯನ್ನು ಸಹ ಕ್ವಾರಂಟೈನ್ ಮಾಡಲಾಗಿದೆ.
ಬಾಣಸವಾಡಿ ಠಾಣೆ ಸೀಲ್ ಡೌನ್: ಮೊಬೈಲ್ ಕಳ್ಳತನ ಹಾಗೂ ಸರಗಳ್ಳತನ ಪ್ರಕರಣದಡಿ ಕಳ್ಳನೋರ್ವನನ್ನು ಪೊಲೀಸರು ದೊಡ್ಡ ಬಾಣಸವಾಡಿ ಬಳಿ ಹಿಡಿದಿದ್ದು, ಸದ್ಯ ಆತನ ಗಂಟಲು ದ್ರವ ಪರೀಕ್ಷೆಯಲ್ಲಿ ಸೋಂಕು ಇರುವುದು ದೃಢವಾಗಿದೆ. ಹೀಗಾಗಿ ಆರೋಪಿ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಪೊಲೀಸರನ್ನು ಸಹ ಕ್ವಾರಂಟೈನ್ ಮಾಡಿ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ.
ಪುಟ್ಟೇನಹಳ್ಳಿ ಪೊಲೀಸ್ ಠಾಣೆ ಸೀಲ್ ಡೌನ್: ಮನೆ ಕಳ್ಳತನ ಪ್ರಕರಣವೊಂದರಲ್ಲಿ ಆರೋಪಿಯನ್ನ ವಶಪಡಿಸಿಕೊಂಡ ವೇಳೆ ಕೊರೊನಾ ತಪಾಸಣೆ ನಡೆಸಿದಾಗ, ಸೋಂಕು ಇರುವುದು ದೃಢಪಟ್ಟಿದೆ. ಸದ್ಯ ಪುಟ್ಟೇನಹಳ್ಳಿ ಠಾಣೆ ಸೀಲ್ ಡೌನ್ ಮಾಡಲಾಗಿದೆ.
ಡಿ.ಜೆ ಹಳ್ಳಿ ಪೊಲೀಸ್ ಠಾಣೆ ಸೀಲ್ ಡೌನ್: ಕೊಲೆಯತ್ನ ಪ್ರಕರಣವೊಂದರಲ್ಲಿ ಆರೋಪಿಯೋರ್ವನನ್ನು ಡಿ.ಜೆ ಹಳ್ಳಿ ಪೊಲೀಸರು ಬಂಧಿಸಿದ್ದರು. ಸದ್ಯ ಆರೋಪಿಗೆ ಕೊರೊನಾ ದೃಢವಾದ ಕಾರಣ ಠಾಣೆಯನ್ನ ಸೀಲ್ ಡೌನ್ ಮಾಡಲಾಗಿದೆ.