ಬೆಂಗಳೂರು: ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಒಂಟಿ ಮಹಿಳೆಯರು ಹಾಗೂ ವೃದ್ಧೆಯರನ್ನೇ ಟಾರ್ಗೆಟ್ ಮಾಡಿ ಚಿನ್ನದ ಸರಗಳನ್ನು ಎಗರಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಉತ್ತರ ಕರ್ನಾಟಕ ಮೂಲದ ಚಂದ್ರಶೇಖರ್(38), ಅಚ್ಯುತ್ ಕುಮಾರ್(40) ಮತ್ತು ಶಿವರಾಜ್(40) ಬಂಧಿತರು. ಇದೇ ವೇಳೆ ಆರೋಪಿಗಳಿಂದ ಕಳ್ಳತನದ ವಸ್ತುಗಳನ್ನು ಸ್ವೀಕರಿಸುತ್ತಿದ್ದ ಹಿರಿಯೂರಿನ ನವೀನ್ ಎಂಬಾತನನ್ನು ಬಂಧಿಸಲಾಗಿದೆ.
ಬಂಧಿತರಿಂದ 58 ಲಕ್ಷ ರೂ. ಮೌಲ್ಯದ 1 ಕೆ.ಜಿ 90 ಗ್ರಾಂ ತೂಕದ ವಿವಿಧ ಮಾದರಿಯ ಚಿನ್ನದ ಸರಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು 2016ರಿಂದ ನಗರದ ಹಲವೆಡೆ ಕೃತ್ಯ ಎಸಗುತ್ತಿದ್ದು, ತಲೆಮರೆಸಿಕೊಂಡು ಓಡಾಡುತ್ತಿದ್ದರು. ಇತ್ತೀಚಿಗೆ ಆರೋಪಿಗಳ ನಿಖರ ಸುಳಿವು ತಿಳಿದುಬಂದಿದ್ದ ಹಿನ್ನೆಲೆ ಸಿಸಿಬಿ ಇನ್ಸ್ಪೆಕ್ಟರ್ ಹಜರೇಶ್ ಕಿಲ್ಲೇದಾರ್ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ.
ನಗರದಲ್ಲಿ ಒಂಟಿ ಮಹಿಳೆಯರು ಹಾಗೂ ವೃದ್ಧೆಯರ ಸರ ಅಪಹರಿಸುತ್ತಿದ್ದ ಆರೋಪಿಗಳು ಕದ್ದ ಚಿನ್ನದ ಸರಗಳನ್ನು ಹೊರ ಜಿಲ್ಲೆ ಅಥವಾ ಹೊರ ರಾಜ್ಯಗಳಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಈ ಮೂವರು ಆರೋಪಿಗಳು ಕಳವು ಮಡಿದ ಚಿನ್ನಾಭರಣಗಳನ್ನು ಹಿರಿಯೂರು ಮೂಲದ ನವೀನ್‌ಗೆ ಮಾರಾಟ ಮಾಡುತ್ತಿದ್ದರು. ಆತನನ್ನು ಸಹ ಇದೀಗ ಬಂಧಿಸಲಾಗಿದೆ. ಆರೋಪಿಗಳ ಬಂಧನದಿಂದ ಸುಬ್ರಮಣ್ಯಪುರ 3, ಕೆ.ಆರ್.ಪುರಂ, ಮಹಾಲಕ್ಷ್ಮೀ ಲೇಔಟ್, ಯಶವಂತಪುರ 2 ಹಾಗೂ ಯಲಹಂಕ ನ್ಯೂಟೌನ್, ಬನಶಂಕರಿ, ಮೈಕೋ ಲೇಔಟ್, ಹೆಬ್ಬಾಳ, ಬೈಯಪ್ಪನಹಳ್ಳಿ, ಬ್ಯಾಟರಾಯನಪುರ, ಸದಾಶಿವನಗರ, ಪೀಣ್ಯ ಹಾಗೂ ವಿವೇಕನಗರ ಠಾಣೆ ವ್ಯಾಪ್ತಿಗಳಲ್ಲಿ ದಾಖಲಾಗಿದ್ದ ತಲಾ ಒಂದೊಂದು ಪ್ರಕರಣಗಳು ಸೇರಿ 18 ಪ್ರಕರಣಗಳು ಪತ್ತೆಯಾಗಿವೆ ಎಂದು ಅವರು ವಿವರಿಸಿದರು.
ಓದಿ: ಮಾರಕಾಸ್ತ್ರಗಳನ್ನು ಹಿಡಿದು ಸುಲಿಗೆ ಆರೋಪ: ನಾಲ್ವರ ಬಂಧನ, ಚಿನ್ನ ವಶಕ್ಕೆ