ಬೆಂಗಳೂರು: ಸಂಚಾರಿ ನಿಯಮ ಉಲ್ಲಂಘಿಸಿದ ಮಾಲೀಕರಿಂದ ಪೊಲೀಸರು ವಶಪಡಿಸಿಕೊಂಡ ವಾಹನಗಳೂ ಸೇರಿದಂತೆ ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಆರೋಪಿಗಳಿಂದ ಜಪ್ತಿ ಮಾಡಲಾದ ಸುಮಾರು 38 ಸಾವಿರ ವಾಹನಗಳು ತುಕ್ಕು ಹಿಡಿಯುತ್ತಿದೆ. ಮತ್ತೊಂದೆಡೆ, ವಶಕ್ಕೆ ಪಡೆದುಕೊಂಡ ವಾಹನಗಳನ್ನು ನಿಲ್ಲಿಸುವುದಕ್ಕೆ ಜಾಗದ ಅಭಾವವೂ ಎದುರಾಗಿದೆ.
2015ರಿಂದ ಇದುವರೆಗೂ ನಗರದಲ್ಲಿ ಸೀಜ್ ಮಾಡಿದ ವಾಹನಗಳ ಪೈಕಿ 38 ಸಾವಿರ ವಾಹನಗಳನ್ನು ಅವುಗಳ ಮಾಲೀಕರು ಇದುವರೆಗೂ ಬಂದು ಬಿಡಿಸಿಕೊಂಡು ಹೋಗಿಲ್ಲ. ಇದರಿಂದ ಠಾಣಾ ಆವರಣದಲ್ಲಿ ಜಾಗವಿಲ್ಲ ಎಂದು ಮಲ್ಲೇಶ್ವರಂ ಬಳಿಯ ಜಕ್ಕರಾಯನ ಕೆರೆಯಲ್ಲಿ ವಶಕ್ಕೆ ಪಡೆದ ವಾಹನಗಳನ್ನು ನಿಲ್ಲಿಸಲಾಗಿದೆ.
ಸದ್ಯ ವಾಹನಗಳು ತುಕ್ಕು ಹಿಡಿಯುತ್ತಿದ್ದು, ಇನ್ನು ಕೆಲ ತಿಂಗಳು ಬಿಟ್ಟರೆ ಹರಾಜು ಹಾಕಿದರೂ ವ್ಯರ್ಥ ಎನ್ನುವ ಪರಿಸ್ಥಿತಿಗೆ ತಲುಪಿವೆ. ನಗರದ ಹಲವು ಪೊಲೀಸ್ ಠಾಣೆಗಳ ಮಂದೆ ಹೆಚ್ಚಿನ ಸಂಖ್ಯೆಯಲ್ಲಿ ನಿಲ್ಲಿಸಲು ಸ್ಥಳಾವಕಾಶ ಇಲ್ಲದಂತಾಗಿದೆ. ಒಂದು ವೇಳೆ ನಿಗದಿಗಿಂತ ಹೆಚ್ಚು ವಾಹನಗಳನ್ನು ಸ್ಟೇಷನ್ ಮುಂದೆ ನಿಲ್ಲಿಸಿದರೆ ವಾಹನ ಸಂಚಾರಕ್ಕೆ ತೊಡಕಾಗಲಿದೆ.
ವಾಹನಗಳ ಹರಾಜಿಗೆ ಆಯುಕ್ತರ ಸೂಚನೆ :
ಇತ್ತ ಜಕ್ಕರಾಯನ ಕೆರೆ ಬಳಿ ವಾಹನಗಳು ಸಾಲಾಗಿ ನಿಲ್ಲಿಸಿರುವುನ್ನು ನೋಡಿದ ಪೊಲೀಸ್ ಕಮೀಷನರ್ ಕಮಲ್ ಪಂತ್, ತುಕ್ಕು ಹಿಡಿಯೋ ಹಂತಕ್ಕೆ ಬಂದಿದ್ದರೂ ಯಾಕೆ ವಿಲೇವಾರಿ ಮಾಡಿಲ್ಲ ಎಂದು ಗರಂ ಆಗಿದ್ದಾರೆ. ತಕ್ಷಣವೇ ಹಿರಿಯ ಅಧಿಕಾರಿಗಳ ಸಭೆ ಕರೆದು ಸೀಜ್ ಆಗಿ ನಿಂತಿರುವ ವಾಹನಗಳನ್ನು ವಿಲೇವಾರಿ ಮಾಡಿ, ಇಲ್ಲದಿದ್ದರೆ ಕೋರ್ಟ್ ಆದೇಶ ಪಡೆದು ಹರಾಜು ಹಾಕಿ ಎಂದು ಸೂಚಿಸಿದ್ದಾರೆ. ಇದರಿಂದ ಎಚ್ಚೆತ್ತ ಪೊಲೀಸರು, ಈಗ ವಾಹನಗಳನ್ನು ಹರಾಜು ಹಾಕಲು ಅನುಮತಿ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.
2015ರಿಂದ ಇದುವರೆಗೂ 38,369 ವಾಹನಗಳು ತುಕ್ಕು ಹಿಡಿದಿವೆ. ಈಗ ಹರಾಜು ಹಾಕಿದ್ರೂ ಹೋಗುತ್ತಾ, ಇಲ್ವಾ? ಅನ್ನೋ ಅನುಮಾನವಿದೆ. ಸದ್ಯ ಪೊಲೀಸರು ಕೋರ್ಟ್ ಆದೇಶಕ್ಕೆ ಕಾಯುತ್ತಿದ್ದು, ಆದಷ್ಟು ಬೇಗ ಹರಾಜು ಪ್ರಕ್ರಿಯೆ ನಡೆಯುವ ಸಾಧ್ಯತೆಯಿದೆ.
ವಿಲೇ ಆಗದೆ ಉಳಿದುಕೊಂಡಿರುವ ವಾಹನಗಳ ವರ್ಷವಾರು ಮಾಹಿತಿ ಹೀಗಿದೆ..
- 2015 -4,528
- 2016 -5,012
- 2017 -7,672
- 2018 - 6,004
- 2019 -5,975
- 2020 - 6,731
- 2021- 2,357
- ಒಟ್ಟು -38,369