ಬೆಂಗಳೂರು : ಪಂಚ ರಾಜ್ಯಗಳ ಚುನಾವಣೆ ಮತ್ತು ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣಾ ಫಲಿತಾಂಶದ ನಡುವೆಯೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸರ್ಕಾರದ ಮುಖ್ಯ ಕಾರ್ಯದರ್ಶಿ ಜೊತೆ ಸತತವಾಗಿ ಸಂಪರ್ಕ ಮಾಡಿ ರಾಜ್ಯಕ್ಕೆ ಆಮ್ಲಜನಕ ತರುವ ಸಂಬಂಧ ಚರ್ಚೆ ನಡೆಸಿದ್ದಾರೆ. ಪರಿಣಾಮವಾಗಿ ಇನ್ನೆರಡ ದಿನದಲ್ಲಿ ರಾಜ್ಯಕ್ಕೆ 30 ಮೆಟ್ರಿಕ್ ಟನ್ ಆಮ್ಲಜನಕ ಬರಲಿದೆ.
ಬೆಳಗ್ಗೆಯಿಂದ ಚುನಾವಣಾ ಫಲಿತಾಂಶದತ್ತ ಎಲ್ಲರಚಿತ್ತ ನೆಟ್ಟಿದ್ದರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಮ್ಲಜನಕ ಕೊರತೆ ನೀಗಿಸುವ ಕುರಿತು ಸತತ ಪ್ರಯತ್ನದಲ್ಲಿ ತೊಡಗಿದ್ದರು. ಈಗಾಗಲೇ ಭುವನೇಶ್ವರಕ್ಕೆ ಎರಡು ಟ್ಯಾಂಕರ್ಗಳು ಬೆಂಗಳೂರಿನಿಂದ ಏರ್ಲಿಫ್ಟ್ ಆಗಿದ್ದು. ಅವುಗಳ ಭರ್ತಿ ಮಾಡಿಸುವ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಜೊತೆ ಸತತ ಸಭೆ ನಡೆಸಿ ಆಮ್ಲಜನಕ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಸಿಎಂ ಪ್ರಯತ್ನದ ಫಲವಾಗಿ ನಾಳೆ ಅಥವಾ ನಾಡಿದ್ದು ರಾಜ್ಯಕ್ಕೆ 30 ಟನ್ ಆಕ್ಸಿಜನ್ ಆಗಮಿಸಲಿದೆ. ನಾಳೆ ಭುವನೇಶ್ವರದಿಂದ ರಸ್ತೆ ಮೂಲಕ ಎರಡು ಟ್ಯಾಂಕರ್ಗಳಲ್ಲಿ ರಾಜ್ಯಕ್ಕೆ ಅಕ್ಸಿಜನ್ ಆಗಮಿಸಲಿದೆ. ಒಂದು ಟ್ಯಾಂಕರ್ನಲ್ಲಿ 15 ಟನ್ ಆಕ್ಸಿಜನ್ನಂತೆ ಒಟ್ಟು 2 ಟ್ಯಾಂಕರ್ ಮೂಲಕ 30 ಟನ್ ಆಕ್ಸಿಜನ್ ರಾಜ್ಯಕ್ಕೆ ಬರಲಿದೆ.
ಉಸಿರಾಟದ ತೊಂದರೆ ಎದುರಿಸುತ್ತಿರುವ ಕೊರೊನಾ ಸೋಂಕಿತರಿಗೆ ಆಮ್ಲಜನಕದ ಕೊರತೆ ಎದುರಾಗುತ್ತಿದ್ದು, ಸಮಸ್ಯೆ ಪರಿಹಾರಕ್ಕೆ ಸರ್ಕಾರ ಆಮ್ಲಜನಕ ತರಿಸುವ ಪ್ರಯತ್ನ ನಡೆಸಿತ್ತು. ಅದರ ಮೊದಲ ಭಾಗವಾಗಿ 30 ಮೆಟ್ರಿಕ್ ಟನ್ ಆಮ್ಲಜನಕ ರಾಜ್ಯಕ್ಕೆ ಆಗಮಿಸುತ್ತಿದೆ.