ಬೆಂಗಳೂರು: ಮೈ ಮೇಲೆ ಚಿನ್ನ ಹಾಕಿಕೊಂಡರೆ ಸರಗಳ್ಳರ ಹಾವಳಿ. ಅದೇ ಚಿನ್ನ ಮನೆಯಲ್ಲಿಟ್ಟರೆ ಮನೆಗಳ್ಳರ ಕಾಟ.. ಇವರಿಬ್ಬರಿಂದ ತಪ್ಪಿಸಿಕೊಳ್ಳಲು ಬ್ಯಾಂಕ್ನಲ್ಲಿಟ್ಟರೇ ಅಲ್ಲಿಯೂ ಸುರಕ್ಷತೆ ಇಲ್ಲದಂತಾಗಿದೆ. ಹೌದು, ಬ್ಯಾಂಕ್ನ ಸೇಫ್ ಲಾಕರ್ನಿಂದ 30 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ.
ಯಲಹಂಕ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕರ್ನಾಟಕ ಬ್ಯಾಂಕ್ನ ಲಾಕರ್ನಲ್ಲಿಟ್ಟಿದ್ದ 580 ಗ್ರಾಂ ಚಿನ್ನ ಮಾಯವಾಗಿದ್ದು, ಈ ಸಂಬಂಧ ದೂರುದಾರ ಬಿಎನ್ ಕೃಷ್ಣಕುಮಾರ್ ದೂರು ನೀಡಿದ್ದಾರೆ. ಸಂತ್ರಸ್ತ ನೀಡಿದ ದೂರಿನ ಮೇರೆಗೆ ಬ್ಯಾಂಕ್ ಮ್ಯಾನೇಜರ್ ಪ್ರದೀಪ್, ಕಸ್ಟೋಡಿಯನ್ಗಳಾದ ಸೌಮ್ಯ ಹಾಗೂ ನಳನ್ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಕೃಷ್ಣಕುಮಾರ್ ಕಳೆದ 10 ವರ್ಷಗಳ ಹಿಂದೆ ಕರ್ನಾಟಕ ಬ್ಯಾಂಕ್ನಲ್ಲಿ ಉಳಿತಾಯ ಖಾತೆ ತೆರೆದಿದ್ದರು. ಕೃಷ್ಣಕುಮಾರ್ನ ಮಗ ಮೂರು ವರ್ಷಗಳಿಂದ ಜರ್ಮನಿಯಲ್ಲಿ ವಾಸವಿದ್ದರು. ಕೃಷ್ಣಕುಮಾರ್ ತಮ್ಮ ಮನೆಯಲ್ಲಿದ್ದ ನಗದು ಮತ್ತು ಚಿನ್ನಾಭರಣ ಸುರಕ್ಷತೆಗಾಗಿ ಕರ್ನಾಟಕ ಬ್ಯಾಂಕ್ನಲ್ಲಿ ಸೇಫ್ ಲಾಕರ್ ತೆರೆದಿದ್ದರು. ಕೆಲ ತಿಂಗಳ ಹಿಂದೆ 30 ಲಕ್ಷ ಮೌಲ್ಯದ 580 ಗ್ರಾಂ ಚಿನ್ನವನ್ನು ಲಾಕರ್ನಲ್ಲಿ ಇರಿಸಿದ್ದರು.
ಕೆಲ ದಿನಗಳ ಹಿಂದೆ ಮಗ ಜರ್ಮನಿಯಿಂದ ಬೆಂಗಳೂರಿಗೆ ಬಂದಿದ್ದರು. ಬಳಿಕ ಮಗ ಮತ್ತು ಕೃಷ್ಣಕುಮಾರ್ ಬ್ಯಾಂಕ್ಗೆ ಬಂದು ಚಿನ್ನಭಾರಣ ತೆಗೆದುಕೊಳ್ಳಲು ಲಾಕರ್ ಓಪನ್ ಮಾಡಿದ್ದಾರೆ. ಈ ವೇಳೆ ಲಾಕರ್ ಖಾಲಿಯಾಗಿದ್ದು, ತಂದೆ - ಮಗ ಇಬ್ಬರು ಆತಂಕಕ್ಕೆ ಒಳಗಾದರು. ಕೃಷ್ಣಕುಮಾರ್ ಮತ್ತು ಆತನ ಮಗ ಕೂಡಲೇ ಬ್ಯಾಂಕ್ ಮ್ಯಾನೇಜರ್ಗೆ ಮಾಹಿತಿ ನೀಡಿದ್ದರು.
ಮ್ಯಾನೇಜರ್ ಪ್ರದೀಪ್ ಮೂರು ದಿನಗಳ ಕಾಲ ಸಮಯ ಕೊಡಿ.. ನಿಮ್ಮ ಚಿನ್ನಾಭರಣವನ್ನು ವಾಪಸ್ ಕೊಡುತ್ತೇವೆ ಎಂದು ಭರವಸೆ ನೀಡಿದ್ದರು. ಮೂರು ದಿನಗಳ ಬಳಿಕ ಮ್ಯಾಜೇಜರ್ ಪ್ರದೀಪ್ ಬಳಿ ಹೋಗಿ ಕೃಷ್ಣಕುಮಾರ್ ಚಿನ್ನಭಾರಣ ಬಗ್ಗೆ ಮಾಹಿತಿ ಕೇಳಿದ್ದಾರೆ. ಈ ವೇಳೆ ಪ್ರದೀಪ್, ಪೊಲೀಸ್ ಠಾಣೆಗೆ ದೂರು ಕೊಡುವುದಾದರೆ ಕೊಡಿ ಎಂದು ಉಡಾಫೆ ಉತ್ತರ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಬಳಿಕ ಕೃಷ್ಣಕುಮಾರ್ ಠಾಣೆಗೆ ತೆರಳಿ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.