ಬೆಂಗಳೂರು : ಕೋವಿಡ್-19 ಕರ್ತವ್ಯನಿರತ ಗ್ರಾಮ ಪಂಚಾಯತ್ ನೌಕರರಿಗೂ ₹30 ಲಕ್ಷ ವಿಮಾ ಪರಿಹಾರ ನೀಡಲು ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕೋವಿಡ್-19 ಕರ್ತವ್ಯ ನಿರತ ಗ್ರಾಮ ಪಂಚಾಯತ್ ನೌಕರರು ಸೋಂಕಿನಿಂದ ಮೃತರಾದ್ರೆ ಅವರ ಕುಟುಂಬಕ್ಕೆ ₹30 ಲಕ್ಷ ವಿಮಾ ಪರಿಹಾರ ನೀಡಲು ಮುಂದಾಗಿದೆ. ಈಗಾಗಲೇ ಸರ್ಕಾರ ಕೋವಿಡ್-19 ಕೆಲಸಕ್ಕೆ ನಿಯೋಜನೆಗೊಳ್ಳುವ ಸರ್ಕಾರದ ಎಲ್ಲಾ ಇಲಾಖೆಗಳ ಎಲ್ಲಾ ವೃಂದದ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದವರಿಗೆ ಮನೋಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಒಂದು ವೇಳೆ ಸೋಂಕಿನಿಂದ ಮೃತರಾದರೆ ಅವರ ಕುಟುಂಬಕ್ಕೆ 30 ಲಕ್ಷ ರೂ. ವಿಮಾ ಪರಿಹಾರವನ್ನು ಘೋಷಿಸಿದೆ. ಅದನ್ನು ಈಗ ಗ್ರಾಮ ಪಂಚಾಯತ್ ನೌಕರರಿಗೂ ವಿಸ್ತರಿಸಿದೆ.
ರಾಜ್ಯದ ಗ್ರಾಮ ಪಂಚಾಯತ್‌ಗಳಲ್ಲಿ ಬಿಲ್ ಕಲೆಕ್ಟರ್, ಕ್ಲರ್ಕ್, ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್, ವಾಟರ್‌ಮೆನ್/ಪಂಪ್ ಆಪರೇಟರ್/ಪಂಪ್ ಮೆಕಾನಿಕ್, ಜವಾನ ಮತ್ತು ಸ್ವಚ್ಛತಾಗಾರರು ಕಾರ್ಯ ನಿರ್ವಹಿಸುತ್ತಿರುತ್ತಾರೆ. ರಾಜ್ಯದ ಗ್ರಾಮ ಪಂಚಾಯತ್ ನೌಕರರು ಚರಂಡಿ ಸ್ವಚ್ಛಗೊಳಿಸುವುದು, ನೈರ್ಮಲ್ಯ ಕಾಪಾಡುವುದು, ಘನ ತ್ಯಾಜ್ಯ ನಿರ್ವಹಣೆ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಜೀವನೋಪಾಯ ಚಟುವಟಿಕೆಗಳು ಮೂಲ ಕರ್ತವ್ಯದ ಜೊತೆಗೆ ಕೋವಿಡ್-19 ಕರ್ತವ್ಯದಲ್ಲಿ ತೊಡಗಿದ್ದಾರೆ.
ಗ್ರಾಮ ಪಂಚಾಯತ್‌ಗಳಲ್ಲಿ ನೌಕರರಿಗೆ ಪಂಚಾಯತ್ ವತಿಯಿಂದ ಯಾವುದೇ ವಿಮಾ ಸೌಲಭ್ಯ ನೀಡಿಲ್ಲ. ಇವರಿಗೆ ನೀಡುತ್ತಿರುವ ವೇತನ ಕೂಡ ಕನಿಷ್ಠ ವೇತನ ವಾಗಿರುತ್ತದೆ. ಈ ಹಿನ್ನೆಲೆ ಸರ್ಕಾರ ಗ್ರಾಮ ಪಂಚಾಯತ್ ನೌಕರರಿಗೂ ವಿಮಾ ಪರಿಹಾರ ಘೋಷಿಸಿದೆ.