ಬೆಂಗಳೂರು: ಮೈಸೂರು ಮೇಯರ್ ಆಯ್ಕೆ ಚುನಾವಣೆ ಸಂದರ್ಭ ವಿಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದ್ದ ಮೂವರು ಕಾಂಗ್ರೆಸ್ ನಾಯಕರನ್ನು ಕಾಂಗ್ರೆಸ್ ಪಕ್ಷ ಅಮಾನತು ಮಾಡಿದೆ.
ಫೆ.24 ರಂದು ನಡೆದ ಮೈಸೂರು ಮಹಾನಗರ ಪಾಲಿಕೆ ಮಹಾಪೌರರು/ಉಪ ಮಹಾಪೌರರ ಚುನಾವಣೆ ನಂತರ ಮೈಸೂರು ಜಿಲ್ಲೆಯ ಕಾಂಗ್ರೆಸ್ ಮುಖಂಡರುಗಳು ಕಾಂಗ್ರೆಸ್ ಪಕ್ಷದ ರಾಜ್ಯ ನಾಯಕರುಗಳ ವಿರುದ್ಧ ಪ್ರತಿಭಟನೆ ಮಾಡಿ ವ್ಯಕ್ತಿಗತವಾಗಿ ಘೋಷಣೆಗಳನ್ನು ಕೂಗಿರುವುದು ಮಾಧ್ಯಮಗಳಲ್ಲಿ ವರದಿಯಾಗಿತ್ತು.
ಈ ಹಿನ್ನೆಲೆಯಲ್ಲಿ ಈ ಕೆಳಕಂಡ ಮುಖಂಡರು ಮಾಡಿರುವ ಪ್ರತಿಭಟನೆಯಿಂದ ಪಕ್ಷಕ್ಕೆ ಹಾನಿ ಉಂಟಾಗಿದೆ ಎಂದು ತಿಳಿಸಿ, ಇವರ ವರ್ತನೆಯನ್ನು ಪಕ್ಷ ವಿರೋಧಿ ಚಟುವಟಿಕೆ ಎಂದು ಪರಿಗಣಿಸಿ ಸದರಿಯವರನ್ನು ಪಕ್ಷದಿಂದ ಅಮಾನತ್ತು ಮಾಡಬೇಕೆಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್. ಮೂರ್ತಿ ಅವರು ಶಿಫಾರಸು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮೂವರು ಮುಖಂಡರುಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪಕ್ಷದಿಂದ ಅಮಾನತು ಮಾಡಿ, ಕೆಪಿಸಿಸಿ ಶಿಸ್ತು ಪಾಲನಾ ಸಮಿತಿಗೆ ಕಳುಹಿಸಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ತಿಳಿಸಿದ್ದಾರೆ.
ಈ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು ಮೈಸೂರು ಜಿಲ್ಲಾ ಕಾಂಗ್ರೆಸ್ ನಾಯಕರಾದ ಅಬ್ದುಲ್ ಖಾದರ್ ಶಾಹಿದ್, (ಅಧ್ಯಕ್ಷ, ಅಜೀಜ್ ಸೇರ್ ಬ್ಲಾಕ್ ಕಾಂಗ್ರೆಸ್ ಸಮಿತಿ, ಮೈಸೂರು), ಅನ್ವರ್ ಪಾಷ, (ಅಣ್ಣು ಭೈ) (ಉಪಾಧ್ಯಕ್ಷ, ಮೈಸೂರು ನಗರ ಡಿಸಿಸಿ, ಮೈಸೂರು) ಹಾಗೂ ಪಿ. ರಾಜು, (ಕೆಪಿಸಿಸಿ ಸದಸ್ಯರು, ಮೈಸೂರು) ಇವರನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಮಾಜಿ ಸಚಿವ ಹಾಗೂ ಶಾಸಕ ತನ್ವೀರ್ ಸೇಠ್ ಹೆಸರು ಪ್ರಮುಖವಾಗಿ ಕೇಳಿ ಬಂದಿತ್ತು. ಇದಕ್ಕೆ ಅವರು 5 ಪುಟಗಳ ವಿಸ್ತೃತ ವಿವರಣೆ ಕೂಡ ನೀಡಿದ್ದರು. ಘಟನೆಯಲ್ಲಿ ತಮ್ಮ ಪಾತ್ರ ಅಥವಾ ಕೈವಾಡ ಇಲ್ಲ ಎಂದು ತಿಳಿಸಿದ್ದರು. ಇದೀಗ ಪಕ್ಷ ಕ್ರಮ ಕೈಗೊಂಡಿದ್ದು ಅಮಾನತುಗೊಂಡ ಮೂವರು ತನ್ವಿರ್ ಸೇಠ್ ಆಪ್ತರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧ ಘೋಷಣೆ: 6 ಮಂದಿ ಕೈ ಕಾರ್ಯಕರ್ತರು ಅಮಾನತು