ಬೆಂಗಳೂರು: ಬೆಳಗಾವಿ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದ ಸಂಬಂಧ ಮೂರು ಪ್ರಕರಣಗಳು ದಾಖಲಾಗಿವೆ. ತನಿಖೆಯನ್ನು ತೀವ್ರಗೊಳಿಸಿರುವ ಸಿಐಡಿ ಪೊಲೀಸರು ಜನವರಿಯಲ್ಲಿ ನಡೆದಿದ್ದ ಪ್ರಕರಣದ ಜಾಡು ಹಿಡಿದು ಹೊರಟಿದ್ದಾರೆ. ಕಿರಣ್ ಎನ್ನುವ ವ್ಯಕ್ತಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ ಎನ್ನುವ ಮಾಹಿತಿ ಮೂಲಗಳಿಂದ ಹೊರ ಬಿದ್ದಿದೆ. ಸಿಐಡಿಗೆ ಪ್ರಕರಣ ವರ್ಗಾವಣೆಯಾದ ಬಳಿಕ ಮೂರು ಪ್ರಕರಣಗಳನ್ನು ಯಮಕನಮರಡಿ, ಸಂಕೇಶ್ವರ, ಹಿರೇಬಾಗೇವಾಡಿ ಠಾಣೆಗಳಲ್ಲಿ ದಾಖಲಿಸಲಾಗಿದೆ ಎನ್ನುವ ಮಾಹಿತಿ ಇದೀಗ ದೊರೆತಿದೆ.
ಐವರು ಪೊಲೀಸರು ಸೇರಿ 20 ಜನರ ವಿಚಾರಣೆ:
ಬೆಳಗಾವಿ ಎಸ್.ಪಿ. ರಾಘವೇಂದ್ರ ಸುಹಾಸ್ಗೆ ನೋಟಿಸ್ ನೀಡಿದ ಸಿಐಡಿ ಪೊಲೀಸರು, ಈಗಾಗಲೇ ಪ್ರಕರಣ ಸಂಬಂಧ 20ಕ್ಕೂ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಕುಟುಂಬಸ್ಥರಿಗೆ ಕೋವಿಡ್ ಎಂದು ವಿಚಾರಣೆಗೆ ಬರಲು ಸಮಯ ಕೇಳಿರುವ ರಾಘವೇಂದ್ರ ಸುಹಾಸ್ ಬಿಟ್ಟು ಗೋಕಾಕ್ ಡಿ.ಎಸ್.ಪಿ, ಯಮಕನಮರಡಿ ಸಬ್ ಇನ್ಸ್ಪೆಕ್ಟರ್, ಹುಕ್ಕೇರಿ ಸರ್ಕಲ್ ಇನ್ಸ್ಪೆಕ್ಟರ್, ಯಮಕನಮರಡಿ ಠಾಣೆಯ ಐವರು ಪೊಲೀಸರು ಸೇರಿ 20 ಜನರ ವಿಚಾರಣೆ ನೆಡೆಸಿದ್ದಾರೆ.
ಪ್ರಕರಣ:
ಬೆಳಗಾವಿ ಎಸ್.ಪಿ ರಾಘವೇಂದ್ರ ಸುಹಾಸ್ ನೀಡಿದ ಮಾಹಿತಿ ಅಧರಿಸಿ ಪುಣೆ-ಮಂಗಳೂರು ಹೈವೆಯಲ್ಲಿ ಪೊಲೀಸರು ಕಾರನ್ನು ವಶಕ್ಕೆ ಪಡೆದಿದ್ದರು. ಖುದ್ದು ಗೋಕಾಕ್ ಡಿ.ಎಸ್.ಪಿ ಜಾವೇದ್ ಇನಾಮ್ದಾರ್ ಹಾಗೂ ತಂಡ ಕಾರನ್ನು ವಶಕ್ಕೆ ಪಡೆದಿದ್ದರು. ಆದರೆ ಕಾರಿನಲ್ಲಿ ಯಾವುದೇ ಚಿನ್ನ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದರು. ಕಾರನ್ನು ಮಾಲೀಕ ಕೋರ್ಟ್ ಮೂಲಕ ವಾಪಸ್ ಪಡೆದಿದ್ದ. ಈ ವೇಳೆ ಕಾರಿನಲ್ಲಿದ್ದ 4.9 ಕೆ.ಜಿ ನಾಪತ್ತೆ ಎಂದು ಕಾರಿನ ಮಾಲೀಕನಿಂದ ದೂರು ದಾಖಲಾಗಿತ್ತು. ಈ ಹಿನ್ನೆಲೆ, ಪ್ರಕರಣ ಸಿ.ಐ.ಡಿ.ಗೆ ವರ್ಗಾವಣೆ ಮಾಡಲಾಗಿತ್ತು. ಪ್ರಕರಣದ ಸಂಬಂಧ ಕಿರಣ್ ಎಂಬಾತನ ಬಂಧನ ಕೂಡ ಮಾಡಲಾಗಿತ್ತು. ಕಿರಣ್ ಹಿರೇಬಾಗೇವಾಡಿಯಲ್ಲಿ ನಕಲಿ ಪೊಲೀಸ್ ಐಡಿ ತೋರಿಸಿದ್ದ ಹಿನ್ನೆಲೆಯಲ್ಲಿ ಆತನ ಬಂಧನ ಮತ್ತು ಆತನಿಗೆ ಸಹಾಯ ಮಾಡಿದ ನೆಪದಲ್ಲಿ ಜನಾರ್ಧನ್ ಎಂಬಾತನ ವಿಚಾರಣೆ ಕೂಡ ನೆಡೆದಿತ್ತು.
ಯಾರು ಈ ಕಿರಣ್?
ಕಿರಣ್ ಯಾರು? ಈತನಿಗೂ ಈ ಪ್ರಕರಣಕ್ಕೂ ಏನು ಸಂಬಂಧ? ಎನ್ನುವುದನ್ನು ಕೆದಕುತ್ತಾ ಹೋದಂತೆ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಚಿನ್ನ ಕಳ್ಳತನ ಆದ ದಿನ ಕಿರಣ್ ಎಂಬಾತ ಹಿರೆಬಾಗೇವಾಡಿ ಪೊಲೀಸ್ ಎಂದು ಹೇಳಿ ಚೆಕ್ ಪೋಸ್ಟ್ ಬಳಿ ಐಡಿ ತೋರಿಸಿ ಹೋಗಿದ್ದ. ಈ ಶಂಕೆಯ ಮೇಲೆ ಕಿರಣ್ ಚಿನ್ನ ದೋಚಿರಬಹುದು ಅಥವಾ ಯಾರಾದರೂ ಕಿರಣ್ ಎಂಬಾತನಿಂದ ಕೃತ್ಯ ಮಾಡಿಸಿದ್ದಾರಾ? ಎನ್ನುವ ಅನುಮಾನ ಮೂಡಿದ ಮೇಲೆ ಆತನನ್ನು ಅರೆಸ್ಟ್ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದರಿಂದ ಗೃಹ ಇಲಾಖೆಯು ವಿಚಾರಣೆಯನ್ನು ಸಿಐಡಿ ಪೊಲೀಸರಿಗೆ ವರ್ಗಾಯಿಸಿತ್ತು. ಈ ಪ್ರಕರಣದಲ್ಲಿ ಕಿರಣ್ ಎಂಬಾತನ ಕೈವಾಡ ಇರುವ ಶಂಕೆ ವ್ಯಕ್ತವಾಗಿದ್ದರಿಂದ ಸಿ.ಐ.ಡಿ ಪೊಲೀಸರು ಬೆಳಗಾವಿ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿ ವಶಕ್ಕೆ ಪಡೆದಿದ್ದರು.
ಇದನ್ನೂ ಓದಿ: ಚಿನ್ನ ಕಳ್ಳತನ ಪ್ರಕರಣ: ಅಜ್ಞಾತ ಸ್ಥಳದಲ್ಲಿ ಕಿರಣ್ ವೀರನಗೌಡರಗೆ ಸಿಐಡಿ ಡ್ರಿಲ್