ಬೆಂಗಳೂರು : ರಾಜ್ಯಾದ್ಯಂತ ಬೇಸಿಗೆಯ ಬಿಸಿ ಹೆಚ್ಚಾಗುತ್ತಿರುವ ಹಿನ್ನೆಲೆ ಕುಡಿಯುವ ನೀರಿಗಾಗಿ ಎಲ್ಲ ತಾಲೂಕುಗಳಿಗೆ 25 ರಿಂದ 50 ಲಕ್ಷ ರೂ. ಗಳನ್ನು ಸರ್ಕಾರ ಬಿಡುಗಡೆ ಮಾಡಿದೆ. ವಿಧಾನಸಭೆಯಲ್ಲಿ ಇಂದು ಶೂನ್ಯ ವೇಳೆಯಲ್ಲಿ ಸದಸ್ಯ ಎ ಟಿ ರಾಮಸ್ವಾಮಿ ಅವರ ಪ್ರಸ್ತಾಪಕ್ಕೆ ಉತ್ತರಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ಈ ವಿಷಯ ತಿಳಿಸಿದರು.
ರಾಜ್ಯದಲ್ಲಿ ಬೇಸಿಗೆಯ ತೀವ್ರತೆ ಹೆಚ್ಚಾಗಿದೆ. ಹೀಗಾಗಿ ಕುಡಿಯುವ ನೀರಿನ ಸಮಸ್ಯೆಯೂ ತಲೆದೋರಿದೆ ಎಂದ ಅವರು, ಈ ಹಿನ್ನೆಲೆ ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ತ್ವರಿತ ಕ್ರಮಗಳನ್ನು ಕೈಗೊಂಡಿದೆ ಎಂದರು. ಕಳೆದ ಮೂರು ವರ್ಷಗಳಿಂದ ಬರಗಾಲಕ್ಕೀಡಾಗಿರುವ ತಾಲೂಕುಗಳಿಗೆ 50 ಲಕ್ಷ ರೂ. ಗಳನ್ನು ಒದಗಿಸಲಾಗಿದೆ ಎಂದ ಅವರು, ಈ ಪೈಕಿ 35 ಲಕ್ಷ ರೂ. ಟಾಸ್ಕ್ ಫೋರ್ಸ್‌ಗೆ ನೀಡಲಾಗುತ್ತದೆ. ಉಳಿದ 15 ಲಕ್ಷ ರೂ. ಗಳನ್ನು ಸಿಇಒಗಳಿಗೆ ಒದಗಿಸಲಾಗುತ್ತದೆ ಎಂದರು.
ಇದೇ ರೀತಿ ಎರಡು ವರ್ಷಗಳಿಂದ ಬರಗಾಲಕ್ಕೀಡಾಗುತ್ತಿರುವ ತಾಲೂಕುಗಳಿಗೆ ತಲಾ 35 ಲಕ್ಷ ರೂಪಾಯಿಗಳನ್ನು ಒದಗಿಸಲಾಗಿದೆ. ಟಾಸ್ಕ್ ಫೋರ್ಸ್‌ಗಳಿಗೆ 25 ಲಕ್ಷ ರೂ., ಸಿಇಒಗಳಿಗೆ 10 ಲಕ್ಷ ರೂ. ಗಳನ್ನು ಒದಗಿಸಲಾಗುವುದು. ಒಂದು ವರ್ಷ ಬರಗಾಲಕ್ಕೀಡಾದ ತಾಲೂಕುಗಳಿಗೆ ತಲಾ 25 ಲಕ್ಷ ರೂಪಾಯಿಗಳನ್ನು ಒದಗಿಸಲಾಗುವುದು. ಈ ಪೈಕಿ ಟಾಸ್ಕ್ ಫೋರ್ಸ್ ಗಳಿಗೆ 15 ಲಕ್ಷ ರೂ. ಮತ್ತು ಸಿಇಒಗಳಿಗೆ 10 ಲಕ್ಷ ರೂ. ಗಳನ್ನು ಒದಗಿಸಲಾಗುವುದು ಎಂದರು.
ಉಳಿದ ತಾಲೂಕುಗಳಿಗೆ ತಲಾ 15 ಲಕ್ಷ ರೂ.ಗಳನ್ನು ನೀಡಲಾಗುವುದು. ಈ ಪೈಕಿ ಟಾಸ್ಕ್ ಫೋರ್ಸ್‌ಗಳಿಗೆ 10 ಲಕ್ಷ ರೂ. ಮತ್ತು ಸಿಇಒಗಳಿಗೆ 5 ಲಕ್ಷ ರೂ. ಒದಗಿಸಲಾಗುವುದು. ಇದನ್ನು ಹೊರತುಪಡಿಸಿಯೂ ಹೆಚ್ಚು ಹಣ ಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದು, ಆರ್ಥಿಕ ಇಲಾಖೆಯಿಂದ ಸದ್ಯದಲ್ಲೇ ಇನ್ನಷ್ಟು ಹಣ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಹಣ ಬಿಡುಗಡೆಯಾದರೆ ಕುಡಿಯುವ ನೀರಿಗೆ ಹೆಚ್ಚುವರಿ ಹಣ ಒದಗಿಸುತ್ತೇವೆ ಎಂದರು.
ಬೇಸಿಗೆಯ ಧಗೆ ಹಿಂದೆಂದೂ ಇಲ್ಲದಷ್ಟು ತೀವ್ರವಾಗಿರುವುದರಿಂದ ಸರ್ಕಾರ ಪರಿಸ್ಥಿತಿ ಎದುರಿಸಲು ಸಜ್ಜಾಗಿದೆ ಎಂದು ಸಚಿವರು ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಬೇಸಿಗೆಯ ತೀವ್ರತೆ ಹೆಚ್ಚುತ್ತಿದೆ. ಇಂತಹ ಕಾಲದಲ್ಲಿ ಕುಡಿಯುವ ನೀರು ಮತ್ತು ವಿದ್ಯುತ್‌ಗೆ ಅಭಾವ ಕಾಣಿಸಿಕೊಳ್ಳುತ್ತಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಎಂದು ಹೇಳಿದರು.
ಓದಿ : ಮುನ್ನೆಚ್ಚರಿಕೆ ಪಾಲಿಸದಿದ್ದರೆ ಕಠಿಣ ನಿಯಮ ಅನಿವಾರ್ಯ: ಸಚಿವ ಡಾ.ಕೆ.ಸುಧಾಕರ್
ಹೀಗಾಗಿ, ಈ ವಿಷಯದ ಬಗ್ಗೆ ಇಷ್ಟೇ ಚರ್ಚೆ ಸಾಲುವುದಿಲ್ಲ. ಆದ್ದರಿಂದ ಕುಡಿಯುವ ನೀರು ಮತ್ತು ವಿದ್ಯುತ್ ಪರಿಸ್ಥಿತಿ ಬಿಗಡಾಯಿಸದಂತೆ ನೋಡಿಕೊಳ್ಳಬೇಕಿದೆ ಮತ್ತು ಇದಕ್ಕಾಗಿ ಮತ್ತಷ್ಟು ಚರ್ಚೆಯ ಅಗತ್ಯವಿದೆ. ಆದ್ದರಿಂದ ಈ ಕುರಿತು ಅರ್ಧ ಗಂಟೆ ಕಾಲದ ಚರ್ಚೆಗೆ ಅವಕಾಶ ನೀಡುತ್ತೇನೆ ಎಂದರು.
ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ಸದಸ್ಯ ಎ ಟಿ ರಾಮಸ್ವಾಮಿ, ರಾಜ್ಯದೆಲ್ಲೆಡೆ ಬೇಸಿಗೆಯ ತೀವ್ರತೆ ಹೆಚ್ಚಾಗುತ್ತಿದೆ. ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದೆ. ಅಂತರ್ಜಾಲ ಕುಸಿಯುತ್ತಿದ್ದು, ಈಗಾಗಲೇ ಜಲಮೂಲಗಳು ತಳ ಕಂಡಿವೆ ಎಂದು ಆತಂಕ ವ್ಯಕ್ತಪಡಿಸಿದರು. ಇಂತಹ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಸರ್ಕಾರ ತಕ್ಷಣವೇ ಸಮರೋಪಾದಿಯ ಕ್ರಮ ತೆಗೆದುಕೊಳ‍್ಳಬೇಕು. ಇಲ್ಲದಿದ್ದರೆ ಪರಿಸ್ಥಿತಿ ಕಷ್ಟಕರವಾಗಲಿದೆ ಎಂದು ಎಚ್ಚರಿಸಿದರು.