ಬೆಂಗಳೂರು : ಜೂನ್ 26ರಂದು ಅಂತಾರಾಷ್ಟ್ರೀಯ ಮಾದಕ ದ್ರವ್ಯಗಳ ವ್ಯಸನ ಮತ್ತು ಕಳ್ಳಸಾಗಣೆ ವಿರುದ್ಧದ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ಹಿನ್ನೆಲೆ ಪೊಲೀಸರು ಜಪ್ತಿ ಮಾಡಲಾದ ಮಾದಕ ವಸ್ತುವನ್ನು ನಾಶಪಡಿಸಲು ನಿರ್ಧರಿಸಿದ್ದಾರೆ. ಕಳೆದ ಒಂದು ವರ್ಷದಲ್ಲಿ 25.6 ಕೋಟಿ ರೂಪಾಯಿ ಬೆಲೆ ಬಾಳುವ ಸುಮಾರು 21 ಟನ್ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದು, ಅದನ್ನು ನಿಯಮಾನುಸಾರ ನಾಶಪಡಿಸಲಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಗಳು ಅನುಮತಿ ನೀಡಲಿವೆ.
24 ಟನ್ ಮಾದಕ ವಸ್ತು ನಾಶ : ಪ್ರಮುಖವಾಗಿ ಪೆಡ್ಲರ್ಗಳಿಂದ ಗಾಂಜಾ, ಆಫೀಮು, ಹೆರಾಯಿನ್, ಕೊಕೈನ್ ಮತ್ತು ಸಿಂಥೆಟಿಕ್ಗಳಾದ ಎಂಡಿಎಂಎ, ಎಲ್‌ಎಸ್‌ಡಿ ಮುಂತಾದ ಮಾದಕ ದ್ರವ್ಯಗಳನ್ನು ಜಪ್ತಿ ಮಾಡಲಾಗಿದೆ. ಇದರಲ್ಲಿ ಬೆಂಗಳೂರು ನಗರ ಒಂದರಲ್ಲೇ ಶೇ.50ಕ್ಕಿಂತ ಹೆಚ್ಚಾಗಿ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ ವರ್ಷವು ಸಹ ಅಂದಾಜು 50.23 ಕೋಟಿ ರೂಪಾಯಿ ಮೌಲ್ಯದ 24 ಟನ್ ಮಾದಕ ವಸ್ತುಗಳನ್ನು ನಾಶಪಡಿಸಲಾಗಿತ್ತು.
8,505 ಪ್ರಕರಣಗಳು ದಾಖಲು : ಕಳೆದ 12 ತಿಂಗಳಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿಯಲ್ಲಿ ಒಟ್ಟು 8,505 ಪ್ರಕರಣ ದಾಖಲಾಗಿವೆ. ಈ ಪೈಕಿ 5,363 ಪ್ರಕರಣಗಳನ್ನು ಭೇದಿಸಲಾಗಿದೆ. ಇನ್ನು 8,505 ಪ್ರಕರಣಗಳಲ್ಲಿ ಅತೀ ಹೆಚ್ಚು ವಿದೇಶಿ ಆರೋಪಿಗಳಿದ್ದಾರೆ. ಇದರಲ್ಲಿ ನೈಜೀರಿಯಾ, ಸುಡಾನ್, ತಾಂಜೆನೀಯಾ ಸೇರಿದಂತೆ ಆಫ್ರಿಕಾ ದೇಶದ ಪ್ರಜೆಗಳು ಹೆಚ್ಚಾಗಿದ್ದಾರೆ. ಈ ದೇಶಗಳಿಂದ ವಿದ್ಯಾರ್ಥಿ ವೀಸಾ ಪಡೆದು ಬರುವ ಇವರು ಹಣ ಮಾಡುವ ಉದ್ದೇಶದಿಂದ ಡ್ರಗ್ ಪೆಡ್ಲಿಂಗ್ನಲ್ಲಿ ತೊಡಗುತ್ತಿದ್ದಾರೆ.
ಇದನ್ನೂ ಓದಿ: ಸಿಸಿಬಿ ಪೊಲೀಸರ ಕಾರ್ಯಾಚರಣೆ: ಇಬ್ಬರು ನೈಜೀರಿಯಾ ಡ್ರಗ್ಸ್ ಪೆಡ್ಲರ್ ಅಂದರ್
ಕಾಲೇಜು ವಿದ್ಯಾರ್ಥಿಗಳು ಹಾಗೂ ಐಟಿ, ಬಿಟಿ ಉದ್ಯೋಗಿಗಳನ್ನು ಟಾರ್ಗೆಟ್ ಮಾಡಿ ಹೆಚ್ಚಿನ ಬೆಲೆಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದಾರೆ. ಇವರ ವಿರುದ್ದ ಕಾರ್ಯಾಚರಣೆ ನಡೆಸಿ ಜೈಲಿಗೆ ಅಟ್ಟಿದ್ರೂ, ಕೆಲವರು ಜಾಮೀನು ಪಡೆದು ಬಂದು ಮತ್ತದೇ ದಂಧೆಯನ್ನು ಮುಂದುವರೆಸುತ್ತಿದ್ದಾರೆ. ಇನ್ನೂ ಕೆಲವರು ವಿಸಾ ಅವಧಿ ಮುಗಿದರು ಸಹ ನಗರದಲ್ಲಿ ಇದ್ದು, ಮಾದಕ ವಸ್ತು ಮಾರಾಟದ ದೊಡ್ಡ ಜಾಲವನ್ನೇ ಕಟ್ಟಿಕೊಂಡಿದ್ದಾರೆ.