ಬೆಂಗಳೂರು: ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಯಾವೆಲ್ಲಾ ಯೋಜನೆಗಳನ್ನು ರೂಪಿಸಬೇಕು. ಪ್ರಸ್ತುತ ಯಾವ ಕಾರ್ಯಕ್ರಮ ಅನುಷ್ಠಾನಕ್ಕೆ ತರಬೇಕೆನ್ನುವ ನಿಟ್ಟಿನಲ್ಲಿ ಜನಸಾಮಾನ್ಯರ, ತಜ್ಞರ ಜತೆಗೆ ಹಲವಾರು ಸಭೆ, ಸಂವಾದಗಳನ್ನು ನಡೆಸುವ ಮೂಲಕ ಸಮಾಲೋಚಿಸಿ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (ಕೆಆರ್ ಎಸ್) ಪಕ್ಷವು ಪ್ರಣಾಳಿಕೆ ಸಿದ್ಧಪಡಿಸಿದೆ ಎಂದು ಬೆಂಗಳೂರು ಜಿಲ್ಲಾಧ್ಯಕ್ಷ ಮಂಜುನಾಥ್ ಎಸ್ ಹೇಳಿದರು.
ಬೆಂಗಳೂರಿನ ಪ್ರೆಸ್ಕ್ಲಬ್ದಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ನೆಲ, ಜಲ ಮತ್ತು ಪರಿಸ್ಥಿತಿ ಅವಲೋಕಿಸಿ ನಮ್ಮ ಕೆ ಆರ್ ಎಸ್ ಪಕ್ಷ ಮುಂಂದಿನ ಚುನಾವಣೆಗೆ ಪ್ರಣಾಳಿಕೆ ಸಿದ್ಧಪಡಿಸಿದೆ. ರಾಜ್ಯ ಸರ್ಕಾರದಲ್ಲಿ ಪ್ರಸ್ತುತ ಖಾಲಿ ಇರುವ 3 ಲಕ್ಷಕ್ಕಿಂತ ಹೆಚ್ಚು ಹುದ್ದೆಗಳನ್ನು ಒಂದು ವರ್ಷದೊಳಗೆ ಭರ್ತಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ಭ್ರಷ್ಟಾಚಾರ ನಿಗ್ರಹಕ್ಕಾಗಿ ಲೋಕಾಯುಕ್ತ ಬಲವರ್ಧನೆ: ಭ್ರಷ್ಟಾಚಾರ ರಹಿತ, ಪಾರದರ್ಶಕ ಮತ್ತು ಜವಾಬ್ದಾರಿಯುತ ಆಡಳಿತ ಹಾಗೂ ಭ್ರಷ್ಟಾಚಾರ ನಿಗ್ರಹಕ್ಕಾಗಿ ಲೋಕಾಯುಕ್ತ ಬಲಪಡಿಸಲು ಕ್ರಮ ಕೈಗೊಳ್ಳಲಾಗುವುದು. ಶಿಕ್ಷಣದ ಪ್ರತಿ ಹಂತದಲ್ಲಿ ಉಚಿತ ಮತ್ತು ಗುಣಮಟ್ಟದ ಶಿಕ್ಷಣಕ್ಕೆ ಕ್ರಮ ವಹಿಸಲಾಗುವುದು. ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಕನಿಷ್ಠ ಒಂದು ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಮತ್ತು ತಾಲೂಕಿಗೆ ಒಂದು ಸರ್ಕಾರಿ ಮಲ್ಟಿ ಸ್ಪಷಾಲಿಟಿ ಆಸ್ಪತ್ರೆ ತೆರೆಯಲಾಗುವುದು ಎಂದು ಹೇಳಿದರು.
ಆರ್ಥಿಕತೆ ವೃದ್ಧಿಗೆ ವಿವಿಧ ಯೋಜನೆ: ಗ್ರಾಮ ಪಂಚಾಯತ್ ಮಟ್ಟದಲ್ಲಿ ಆರ್ಥಿಕತೆ ವೃದ್ಧಿಗೆ ವಿವಿಧ ಯೋಜನೆ ಜಾರಿ, ಉದ್ಯೋಗ, ಗ್ರಾಮಸ್ವರಾಜ್ಯ ವೈಜ್ಞಾನಿಕ ಬೆಳೆ ಮತ್ತು ಬೆಳೆ ಪದ್ಧತಿ ಜಾರಿ, ಕೃಷಿ ಉತ್ಪನ್ನಗಳಿಗೆ ಗ್ರಾಮೀಣ ಭಾಗದಲ್ಲಿ ಯೋಗ್ಯ ಬೆಲೆ ಸಿಗುವಂತೆ ಕ್ರಮ ಕೈಗೊಳ್ಳಲಾಗುವುದು. ಸಾಲ ಮುಕ್ತ ರೈತ, ಬಡತನ ಮುಕ್ತ ಹಳ್ಳಿಗಳು, ರಾಜ್ಯಾದ್ಯಂತ ಇರುವ ಕೆರೆಗಳನ್ನು ತುಂಬಿಸಿ ಅಂತರ್ಜಲ ವೃದ್ಧಿಸುವುದು. ರಾಜ್ಯದ ಪ್ರತಿ ಹಳ್ಳಿ, ಪಟ್ಟಣಕ್ಕೆ ನದಿಗಳಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ವಿವರಣೆ ನೀಡಿದರು.
ಗ್ರಾಮೀಣಾಭಿವೃದ್ಧಿಗೆ ಆದ್ಯತೆ: ಗ್ರಾಮೀಣಾಭಿವೃದ್ಧಿ ಇಲಾಖೆಗೆ ಕಾಯಕಲ್ಪ ನೀಡಿ ಅಧಿಕಾರ ವಿಕೇಂದ್ರೀಕರಣಕ್ಕೆ ಆದ್ಯತೆ ಕೊಟ್ಟು ಗ್ರಾಮ ಸ್ವರಾಜ್ಯ ಸ್ಥಾಪನೆಗೆ ಆದ್ಯತೆ ನೀಡಲಾಗುವುದು. ಪ್ರತಿ ಗ್ರಾಮದಲ್ಲಿಯೂ ಸುಸಜ್ಜಿತ ನಾಗರಿಕ ಸೌಲಭ್ಯಗಳನ್ನು ಒದಗಿಸಲಾಗುವುದು. ನೈರ್ಮಲ್ಯತೆಗೆ ಆದ್ಯತೆ ನೀಡಿ ಸ್ವಚ್ಛ ಗ್ರಾಮಗಳನ್ನಾಗಿ ನಿರ್ಮಿಸಲಾಗುವುದು. ಕಾಲಕಾಲಕ್ಕೆ ಪಟ್ಟಣ ಪಂಚಾಯತಿಗಳಾಗಿ ಮೇಲ್ದರ್ಜೆಗೇರಿಸುವ ಕೆಲಸ ನಿರ್ವಹಿಸಲಾಗುವುದು ಎಂದು ಮಾಹಿತಿ ನೀಡಿದರು.
ಮೂರು ವರ್ಷಗಳ ಹಿಂದೆ ಕೇವಲ 20 ಸಮಾನ ಮನಸ್ಕರು ಸೇರಿ ಆರಂಭಿಸಿದ ಪಕ್ಷ ಇಂದು 18 ಸಾವಿರಕ್ಕಿಂತ ಹೆಚ್ಚು ಸದಸ್ಯರನ್ನು ಹೊಂದಿದೆ. ಪ್ರತಿ ದಿನ ಸ್ವಯಂ ಪಕ್ಷ ಸೇರುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.
8 ವರ್ಷಗಳಲ್ಲಿ ನಮ್ಮ ಮೆಟ್ರೋ ಪೂರ್ಣ: ನಮ್ಮ ಮೆಟ್ರೋ ಯೋಜನೆಯ ಎಲ್ಲ ಹಂತಗಳನ್ನು ಮತ್ತು ಬೆಂಗಳೂರಿನ ಎಲ್ಲಾ ದಿಕ್ಕುಗಳಿಗೂ ವಿಸ್ತರಿಸಿ ಇನ್ನು 8 ವರ್ಷಗಳಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು. ನೂರಾರು ವಿಚಾರ ವಿಷಯಗಳ ಪ್ರಣಾಳಿಕೆಯನ್ನು ಕೆಆರ್ಎಸ್ ಪಕ್ಷದ ಬೆಂಗಳೂರು ಜಿಲ್ಲಾಧ್ಯಕ್ಷ ಮಂಜುನಾಥ್ ಎಸ್ ಅವರು ಬಿಡುಗಡೆ ಮಾಡಿದರು.
ಇದನ್ನೂಓದಿ:ಸ್ಪೀಕರ್ ಕಾಗೇರಿಗೂ ತಟ್ಟಿದ ಕಳಪೆ ಕಾಮಗಾರಿ ಬಿಸಿ: ಶಂಕುಸ್ಥಾಪನೆ ಮಾಡದೆ ವಾಪಸ್