ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತಿವೆ. ಇದೀಗ ಎಸ್‌ಡಿಪಿಐ 2023ರ ವಿಧಾನಸಭಾ ಚುನಾವಣಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಇಂದು ಎಸ್‌ಡಿಪಿಐ 10 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ತನ್ನ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಈ ಸಂಬಂಧ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ ಫೈಜಿ, ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದರು.
ಮೈಸೂರಿನ ಜಿಲ್ಲೆಯ ನರಸಿಂಹರಾಜ ಕ್ಷೇತ್ರದಲ್ಲಿ ಅಬ್ದುಲ್ ಮಜೀದ್, ಬೆಂಗಳೂರಿನ ಪುಲಕೇಶಿ ನಗರ ಕ್ಷೇತ್ರದಲ್ಲಿ ಭಾಸ್ಕರ್ ಪ್ರಸಾದ್, ದ.ಕನ್ನಡ ಜಿಲ್ಲೆಯ ಮೂಡಬಿದ್ರೆಯಲ್ಲಿ ಅಲ್ಪಾನ್ಸೋ ಫ್ರಾಂಕೋ, ಬೆಳ್ತಂಗಡಿಯಲ್ಲಿ ಅಕ್ಬರ್ ಬೆಳ್ತಂಗಡಿ, ಕಾಪು ಕ್ಷೇತ್ರದಲ್ಲಿ ಹನೀಶ್ ಮಳ್ಳೂರ್, ದಾವಣಗೆರೆಗೆ ಇಸ್ಮಾಯಿಲ್ ಝಬಿವುಲ್ಲಾ, ಚಿತ್ರದುರ್ಗ ಶ್ರೀನಿವಾಸ್ ಬಾಳೆಕಾಯಿ, ವಿಜಯನಗರ ನಸೀರ್ ಖಾನ್ ಮತ್ತು ಸರ್ವಜ್ಞನಗರದಲ್ಲಿ ಅಬ್ದುಲ್ ಹನ್ನಾನ್ ಗೆ ಟಿಕೆಟ್ ನೀಡಲಾಗಿದೆ.
ರಾಜ್ಯದಲ್ಲಿ ಸಂವಿಧಾನಕ್ಕೆ ಬೆಲೆ ಇಲ್ಲದಂತಾಗಿದೆ; ಇದೇ ವೇಳೆ ಮಾತನಾಡಿದ ಎಂ.ಕೆ ಫೈಜಿ, ಎಸ್‌ಡಿಪಿಐ 100 ಕ್ಷೇತ್ರದಲ್ಲಿ ಟಿಕೆಟ್ ನೀಡಲಿದೆ. 43 ಕ್ಷೇತ್ರ ಅಂತಿಮವಾಗಿದೆ. ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಹಾಳಾಗಿದೆ. ಕಳೆದ ಬಾರಿ ಬಿಜೆಪಿಗೆ ಬಹುಮತ ಸಿಗಲಿಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿ ಸರ್ಕಾರ ಮಾಡಿದ್ರು. ಆದರೆ ಕಾಂಗ್ರೆಸ್ ಪಕ್ಷದ ಶಾಸಕರನ್ನ ಖರೀದಿಸಿ ಸರ್ಕಾರ ರಚನೆ ಮಾಡಿತು. ಬಿಜೆಪಿ ಬಟ್ಟೆ ಖರೀದಿ ಮಾಡಿದಂತೆ ಖರೀದಿಸಿದ್ರು. ಬಿಜೆಪಿಗೆ ಜನರ ಮುಂದೆ ಇಡಲು ಯಾವುದೇ ವಿಚಾರ ಇಲ್ಲ. ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ ಎಂದು ಆರೋಪಿಸಿದರು.
ಬಿಜೆಪಿ ಮುಂದಿನ ಚುನಾವಣೆಗೂ ಕೂಡ ಗದ್ದಲ ಮಾಡಲು ಮುಂದಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅಭಿವೃದ್ಧಿ ಬಗ್ಗೆ ಕೇಳಬೇಡಿ ಅಂತ ಹೇಳಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಕೂಡ ಪ್ರಜಾಪ್ರಭುತ್ವ ರಕ್ಷಣೆ ಮಾಡಬೇಕು. ಆದರೆ, ಅವರ ಕೈಯಲ್ಲೂ ಕೂಡ ಇದು ಆಗುತ್ತಿಲ್ಲ. ಹೀಗಾಗಿ SDPI ಹೊಸ ಪರ್ಯಾಯ ಪಕ್ಷವಾಗಿದೆ. ಪ್ರಜಾಪ್ರಭುತ್ವ ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡ್ತಿದೆ. ಉಳಿದ ಕಡೆ ಅಭ್ಯರ್ಥಿ ಅಂತಿಮ ಮಾಡಲಾಗುತ್ತಿದೆ ಎಂದು ಹೇಳಿದರು.
100 ಕ್ಷೇತ್ರಗಳಲ್ಲಿ ಕಣಕ್ಕಿಳಿಯಲು ಚಿಂತನೆ: ಮುಸ್ಲಿಂ ಪ್ರಾಬಲ್ಯ ಇರುವ ಕಡೆ ಎಸ್‌ಡಿಪಿಐ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ಆ ಮೂಲಕ ಕಾಂಗ್ರೆಸ್ ಹಾಗೂ ಜೆಡಿಎಸ್ಗೆ ದೊಡ್ಡ ಸವಾಲು ಒಡ್ಡುತ್ತಿದೆ. 2013ರ ವಿಧಾನಸಭೆ ಚುನಾವಣೆ ವೇಳೆ ಬಿಎಸ್ಪಿ ಜೊತೆಗಿನ ಮೈತ್ರಿಯೊಂದಿಗೆ SDPI 24 ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿತ್ತು. 2013 ರಲ್ಲಿ SDPI ಪಕ್ಷ ಒಟ್ಟು 1,01,226 ಮತ ಗಳಿಸಲು ಸಫಲವಾಗಿತ್ತು. ಈ ಬಾರಿ SDPI 100 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮುಂದಾಗಿದೆ. ಆ ಮೂಲಕ ಕಾಂಗ್ರೆಸ್ಗೆ ದೊಡ್ಡ ಪ್ರಮಾಣದಲ್ಲಿ ಸೆಡ್ಡು ಹೊಡೆಯಲು ನಿರ್ಧರಿಸಿದೆ.
ಕಾಂಗ್ರೆಸ್ಗೆ ಪ್ರಬಲ ಪೈಪೋಟಿ: 2013ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ನರಸಿಂಹರಾಜ ಕ್ಷೇತ್ರದಲ್ಲಿ ಅಬ್ದುಲ್ ಮಜೀದ್ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಗೆ ಟಫ್ ಫೈಟ್ ನೀಡಿದ್ದರು. 8,370 ಮತಗಳ ಅಂತರದಿಂದ ಸೋಲು ಕಂಡು, ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಈ ಬಾರಿ ಮತ್ತೆ ಆ ಕ್ಷೇತ್ರದಲ್ಲಿ ಅಬ್ದುಲ್ ಮಜೀದ್ಗೆ ಟಿಕೆಟ್ ನೀಡಲಾಗಿದೆ. ಬೆಂಗಳೂರಿನ ಸರ್ವಜ್ಞನಗರ, ಪುಲಕೇಶಿನಗರದಲ್ಲಿ ಕಳೆದ ಬಾರಿ SDPI ಅಭ್ಯರ್ಥಿಗಳು ಪ್ರಬಲ ಪೈಪೋಟಿ ನೀಡಿದ್ದರು.
ಈ ಬಾರಿನೂ ಕಳೆದ ಬಾರಿ ಉತ್ತಮ ಪ್ರದರ್ಶನ ನೀಡಿದ್ದ ಕ್ಷೇತ್ರಗಳು ಸೇರಿದಂತೆ ಮುಸ್ಲಿಂ ಸಮುದಾಯ ಹೆಚ್ಚಿರುವ ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಸ್ಪರ್ಧೆಗಿಳಿಸಲು ಮುಂದಾಗಿದೆ. ಆ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಟಕ್ಕರ್ ನೀಡಲು ಸಜ್ಜಾಗಿದೆ.
ಇದನ್ನೂ ಓದಿ: ನಿಮ್ಮ ಪುತ್ರ ಸ್ಯಾಂಟ್ರೋ ರವಿಗೆ ಸ್ವೀಟ್ ಬ್ರದರ್ ಆಗಿರುವುದು ಹೇಗೆ?: ಸಿಎಂಗೆ ಕಾಂಗ್ರೆಸ್ ಪ್ರಶ್ನೆ