ಬೆಂಗಳೂರು: ದಿನೆ ದಿನೆ ಕೊರೊನಾ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆ ವೈದ್ಯಕೀಯ ಸಿಬ್ಬಂದಿ ಕೊರತೆಯೂ ಸಹ ಹೆಚ್ಚಾಗುತ್ತಿದೆ. ಹಾಗಾಗಿ ವಾರಾಂತ್ಯದಲ್ಲಿ ಕೋವಿಡ್ ರೋಗಿಗಳ ಚಿಕಿತ್ಸೆಗೆ ಕನಿಷ್ಟ ಎರಡು ಸಾವಿರ ವೈದ್ಯರು ಹೆಚ್ಚುವರಿಯಾಗಿ ಲಭ್ಯರಾಗಲಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ತಿಳಿಸಿದರು.
ಕೆಂಗೇರಿ ಸಮೀಪದ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಕೋವಿಡ್-19 ಪ್ರಯೋಗಾಲಯ ಮತ್ತು ಸ್ನಾತಕೋತ್ತರ ಪದವಿ ತರಗತಿಗಳಿಗೆ ಚಾಲನೆ ನೀಡಿ ಮಾತನಾಡಿದರು. ಒಂದೆರಡು ದಿನಗಳಲ್ಲಿ ಸ್ನಾತಕೋತ್ತರ ವೈದ್ಯ ಪದವಿ ಫಲಿತಾಂಶ ಪ್ರಕಟವಾಗಲಿದೆ. ಬಳಿಕ ಇಂಟರ್ನಿ ವಿದ್ಯಾರ್ಥಿಗಳು ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ಹೇಳಿದರು.
ಕೋವಿಡ್ ವಿರುದ್ಧದ ಹೋರಾಟದಲ್ಲಿ ಭಾರತವು ಅಮೆರಿಕಾದಂತಹ ಮುಂದುವರಿದ ರಾಷ್ಟ್ರಗಳಿಗಿಂತ ಉತ್ತಮ ಸಾಧನೆ ಮಾಡಿದೆ. ಆ ದೇಶಗಳಿಗಿಂತ ನಮ್ಮಲ್ಲಿ ಸೌಲಭ್ಯಗಳ ಕೊರತೆ ಇದ್ದರೂ ಸಹ ಮರಣ ಪ್ರಮಾಣ ನಮ್ಮಲ್ಲಿ ಕಡಿಮೆಯಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವವೇ ಇದಕ್ಕೆ ಕಾರಣ ಎಂದರು.
ವೈದ್ಯರುಗಳಿಂದ ಜನರು ಹೆಚ್ಚಿನದನ್ನು ನಿರೀಕ್ಷಿಸುತ್ತಿದ್ದಾರೆ. ಇದೊಂದು ಪವಿತ್ರ ಹೊಣೆಗಾರಿಕೆಯಿರುವ ವೃತ್ತಿಯಾಗಿದ್ದು, ಭವಿಷ್ಯದಲ್ಲಿ ಇದರ ಮೌಲ್ಯಗಳನ್ನು ಎತ್ತಿಹಿಡಿಯಬೇಕು ಎಂದು ವೈದ್ಯ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಆದಿಚುಂಚನಗಿರಿ ಮಠ ದೇಶಾದ್ಯಂತ ಐದುನೂರಕ್ಕೂ ಹೆಚ್ಚು ಸಂಸ್ಥೆಗಳ ಮೂಲಕ ಅಕ್ಷರ, ಅನ್ನ ಮತ್ತು ಆರೋಗ್ಯ ದಾಸೋಹ ನಡೆಸುತ್ತಿದೆ. ನೂರಾರು ಮಂದಿಗೆ ಆಶ್ರಯ ನೀಡಿರುವ ಜೊತೆಗೆ ಲಕ್ಷಾಂತರ ಮಂದಿಯ ಭವಿಷ್ಯ ರೂಪಿಸುವ ಕಾರ್ಯ ನಿರಂತರವಾಗಿ ನಡೆದುಕೊಂಡು ಬಂದಿರುವುದು ಶ್ಲಾಘನೀಯ. ಬಾಲಗಂಗಾಧರನಾಥ ಸ್ವಾಮೀಜಿಯವರ ದೂರದರ್ಶಿತ್ವ ಮತ್ತು ನಿರ್ಮಲಾನಂದ ಸ್ವಾಮೀಜಿಯವರ ಪರಿಶ್ರಮ ಈ ಶ್ರೇಯಕ್ಕೆ ಕಾರಣ ಎಂದರು.
ಕಾರ್ಯಕ್ರಮದಲ್ಲಿ ಬಿಜಿಎಸ್ ಗ್ಲೋಬಲ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಪ್ರಕಾಶನಾಥ ಸ್ವಾಮೀಜಿ, ಆರೋಗ್ಯ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ. ಬಿ.ಸಿ. ಭಗವಾನ್ ಮತ್ತು ಕಾಲೇಜಿನ ಪ್ರಾಂಶುಪಾಲ ಡಾ. ಮೋಹನ್ ಹಾಜರಿದ್ದರು.