ಬೆಂಗಳೂರು: ಕೊರೊನಾ ವೈರಸ್ ನಿಯಂತ್ರಣಕ್ಕಾಗಿ 200 ಕೋಟಿ ರೂಪಾಯಿ ಬಿಡುಗಡೆ ಮಾಡಿರುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
ವಿಶೇಷ ಸಂಪುಟ ಸಭೆಯ ಬಳಿಕ ವಿಧಾನಸಭೆಯಲ್ಲಿ ಮಾತನಾಡಿದ ಅವರು, ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಮಾರ್ಚ್ 31 ರ ವರೆಗೆ ರಾಜ್ಯದಲ್ಲಿ ನಿರ್ಬಂಧಗಳನ್ನು ವಿಸ್ತರಿಸಲಾಗಿದೆ. ವಿಶೇಷ ಸಂಪುಟ ಸಭೆಯಲ್ಲಿ ಕೊರೊನಾ ವೈರಸ್ ಬಗ್ಗೆ ಸಾಕಷ್ಟು ಚರ್ಚೆ ಆಗಿದೆ. ಪ್ರಮುಖವಾಗಿ ಕೊರೊನಾ ವೈರಸ್ ಮೇಲೆ ನಿಗಾ ಇಡಲು ಟಾಸ್ಕ್ ಫೋರ್ಸ್ ರಚನೆಗೆ ನಿರ್ಧರಿಸಲಾಗಿದೆ ಎಂದು ವಿವರಿಸಿದರು.
ಟಾಸ್ಕ್ ಫೋರ್ಸ್ ನಲ್ಲಿ ಸಚಿವರಾದ ಡಾ.ಸುಧಾಕರ್, ಡಾ. ಅಶ್ವತ್ಥ್ ನಾರಾಯಣ್, ಬಸವರಾಜ್ ಬೊಮ್ಮಾಯಿ, ಶ್ರೀರಾಮುಲು ಇರಲಿದ್ದಾರೆ. ನಿತ್ಯ ಈ ಟಾಸ್ಕ್ ಫೋರ್ಸ್ ನಿಂದ ಕೊರೊನಾ ಅಪ್ಡೇಟ್ ಬುಲೆಟಿನ್ಗಳನ್ನು ಪ್ರಕಟಣೆ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಬರುವವರನ್ನು ಪ್ರತ್ಯೇಕವಾಗಿ 15 ದಿನ ಇರಿಸಲು ತೀರ್ಮಾನಿಸಲಾಗಿದೆ. ಇನ್ನು ವಿಧಾನಸೌಧ, ವಿಕಾಸಸೌಧ, ಎಂಎಸ್ ಕಟ್ಟಡಗಳಿಗೆ ಸಾರ್ಜಜನಿಕರ ಭೇಟಿ ನಿಷೇಧಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಹಕ್ಕಿ ಜ್ವರ ಮಂಡ್ಯ, ಮೈಸೂರು ಭಾಗದಲ್ಲಿ ಹೆಚ್ಚಾಗಿದ್ದರೆ, ಮಂಗನಕಾಯಿಲೆ ಶಿವಮೊಗ್ಗ, ಉತ್ತರ ಕನ್ನಡದಲ್ಲಿ ಕಾಣಿಸಿಕೊಂಡಿದೆ. ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಮಾಹಿತಿ ನೀಡಿದರು.