ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 7ನೇ ವರ್ಷದ ಆಡಳಿತ ಮತ್ತು ಎರಡನೇ ಅವಧಿಯಲ್ಲಿ ಎರಡು ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಮೇ 30ರಂದು ರಾಜ್ಯದ 18,418 ಗ್ರಾಮಗಳಲ್ಲಿ ಸೇವಾ ಚಟುವಟಿಕೆಗಳು ನಡೆದಿವೆ.
ಒಟ್ಟು 19 ಲಕ್ಷ ಕಾರ್ಯಕರ್ತರು ಈ ಸೇವಾ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ರಾಜ್ಯದ ಒಂದು ಕೋಟಿಗೂ ಹೆಚ್ಚು ಬಡವರಿಗೆ ಇದರ ಪ್ರಯೋಜನ ಲಭಿಸಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ನಗರ ಕಾರ್ಯಾಲಯ “ಭಾವುರಾವ್ ದೇಶಪಾಂಡೆ ಭವನ”ದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮೇ 30ರಂದು ಪಕ್ಷದ ವತಿಯಿಂದ ನಡೆದ ಸೇವಾ ಚಟುವಟಿಕೆಗಳಿಂದ ಒಂದು ಕೋಟಿಗೂ ಹೆಚ್ಚು ಬಡವರು, ನಿರಾಶ್ರಿತರು, ಕಾರ್ಮಿಕರು, ಕೋವಿಡ್ ಪೀಡಿತರು ಮತ್ತು ಕುಟುಂಬಸ್ಥರು, ಆಟೋ ಚಾಲಕರು, ಟ್ಯಾಕ್ಸಿ ಚಾಲಕರು, ಮಂಗಳಮುಖಿಯರು, ಪೌರ ಕಾರ್ಮಿಕರು, ಬಡ ರೈತರು ಮುಂತಾದವರಿಗೆ ಪ್ರಯೋಜನ ಲಭಿಸಿದೆ ಎಂದು ತಿಳಿಸಿದರು.
ಬೂತ್‍ನಿಂದ ಹಿಡಿದು ಪಟ್ಟಣದ ವಾರ್ಡ್ಗಳ ವರೆಗೆ ಸೇವೆ
ಗ್ರಾಮದ ಬೂತ್‍ನಿಂದ ಹಿಡಿದು ಪಟ್ಟಣದ ವಾರ್ಡ್‍ಗಳೂ ಸೇರಿದಂತೆ, ಬೂತ್‍ನ ಕಾರ್ಯಕರ್ತರಿಂದ ಹಿಡಿದು ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿಗಳು ಹಾಗೂ ಮಾನ್ಯ ರಾಜ್ಯ ಬಿಜೆಪಿ ಅಧ್ಯಕ್ಷರವರೆಗೆ, ಮಂತ್ರಿಗಳು, ಸಂಸದರು ಹಾಗೂ ಶಾಸಕರುಗಳು ಕೋವಿಡ್ ಸಂಕಷ್ಟದ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಯಾವುದೇ ಪ್ರಚಾರಕ್ಕೆ ಒತ್ತುಕೊಡದೆ ಅತ್ಯಂತ ಮುಖ್ಯವಾಗಿ ಕೋವಿಡ್ ಸೇವಾ ಚಟುವಟಿಕೆಗೆ ಹೆಚ್ಚು ಒತ್ತು ನೀಡಲಾಗಿದೆ ಎಂದು ವಿವರ ನೀಡಿದರು.
ಒಟ್ಟು 23,63,967 ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಿಸಲಾಗಿದೆ. ಬಡವರಿಗೆ 5 ಕೆಜಿ, 10 ಕೆಜಿ, 25 ಕೆಜಿ ಪಡಿತರ ಇರುವ 4,96,422 ರೇಷನ್ ಕಿಟ್ ವಿತರಿಸಲಾಗಿದೆ. 13,12,901 ಆಹಾರ ಪೊಟ್ಟಣ ವಿತರಿಸಲಾಗಿದೆ. ಅನೇಕ ಕುಟುಂಬಗಳಿಗೆ ಕೋವಿಡ್ ತಗುಲಿದ್ದು, ಅಂಥ ಕುಟುಂಬಕ್ಕೆ ಹೊರಗಿನಿಂದ ವಾರಗಟ್ಟಲೆ- 15 ದಿನಗಳ ಕಾಲ ಆಹಾರ ಪೊಟ್ಟಣ ನೀಡಿದ ನೂರಾರು ಉದಾಹರಣೆಗಳು ನಮ್ಮ ರಾಜ್ಯದಲ್ಲಿದೆ ಎಂದರು.
ಸಾಮಾಜಿಕ ಜಾಗೃತಿ ಕಾರ್ಯಕ್ರಮ
ಕೋವಿಡ್ ಮತ್ತು ಲಸಿಕೆ ಕುರಿತು 3,19,366 ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳನ್ನು ಗ್ರಾಮೀಣ ಪ್ರದೇಶದಲ್ಲಿ ನಡೆಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಏಳು ವರ್ಷ ತುಂಬಿದ ಹಿನ್ನೆಲೆ ಮೇ 30ರಂದು ಸೇವಾ ಹೀ ಸಂಘಟನ್ ಅಡಿ ಸೇವಾ ಕಾರ್ಯಕ್ರಮ ನಡೆಸಿ ಬಡವರಿಗೆ ನೆರವಾಗಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಕರೆ ನೀಡಿದ್ದರು. ಇದರನ್ವಯ ಕಾರ್ಯಕ್ರಮಗಳು ನಡೆದಿವೆ. ಇದಲ್ಲದೆ, ಕರ್ನಾಟಕದಲ್ಲಿ ಮುಖ್ಯಮಂತ್ರಿಗಳು ಪ್ಯಾಕೇಜ್ ಪ್ರಕಟಿಸಿದ ಕಾರಣ ಲಕ್ಷಾಂತರ ಜನರಿಗೆ ಸಹಾಯ ಆಗಿದೆ ಎಂದು ವಿವರಿಸಿದರು.
3,49,151 ಕೋವಿಡ್ ರೋಗ ನಿರೋಧಕ ಕಿಟ್ ವಿತರಣೆ ನಡೆದಿದೆ. ಥರ್ಮಲ್ ಮತ್ತು ಆಕ್ಸಿಮೀಟರ್ ಮೂಲಕ 3,25,919 ಜನರನ್ನು ಪರೀಕ್ಷೆ ಮಾಡಲಾಗಿದೆ. ಕೆಜಿಎಫ್‍ನಲ್ಲಿ 800 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನು ಸ್ವಚ್ಛಗೊಳಿಸಲಾಗಿದೆ. ಕೆಲವೆಡೆ 15ರಿಂದ 20 ದಿನಗಳ ಕಾಲ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. 17,222 ಕಾರ್ಯಕರ್ತರು ಸ್ಲಂ ಏರಿಯಾ ಸೇರಿದಂತೆ ರಾಜ್ಯದ ವಿವಿಧೆಡೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ವೈಯಕ್ತಿಕ ನೆರವಿನ 18,525 ಇತರ ಸೇವಾ ಚಟುವಟಿಕೆಗಳೂ ನಡೆದಿವೆ. ಅವಶ್ಯಕತೆ ಇರುವವರಿಗೆ 1,665 ಆಮ್ಲಜನಕ ಕಾನ್ಸನ್‍ಟ್ರೇಟರ್ ಒದಗಿಸಲಾಯಿತು. ರೂ. 50 ಸಾವಿರದಿಂದ 1 ಲಕ್ಷ ವೆಚ್ಚ ಇದಕ್ಕೆ ತಗಲುತ್ತದೆ. 1,075 ರಕ್ತದಾನ ಶಿಬಿರಗಳನ್ನು ಏರ್ಪಡಿಸಲಾಗಿತ್ತು ಎಂದು ತಿಳಿಸಿದರು.
ಸೇಡಂ, ಮಂಗಳೂರು ಸೇರಿ 23 ಕೋವಿಡ್ ಸೆಂಟರ್ ತೆರೆಯಲಾಗಿದೆ. 9,026 ಕೋವಿಡ್ ಪೀಡಿತರಿಗೆ ಆ್ಯಂಬುಲೆನ್ಸ್ ಸೇವೆ ಒದಗಿಸಲಾಗಿದೆ. ಶವಸಂಸ್ಕಾರಗಳಲ್ಲಿ ನಮ್ಮ ಕಾರ್ಯಕರ್ತರು ಪಿಪಿಇ ಕಿಟ್ ಧರಿಸಿ ಭಾಗವಹಿಸಿದ್ದು, ಚಾಮರಾಜನಗರದಲ್ಲಿ 200ಕ್ಕೂ ಹೆಚ್ಚು ಸೇರಿದಂತೆ ರಾಜ್ಯದ ವಿವಿಧೆಡೆ 3,986 ಕೋವಿಡ್ ಪೀಡಿತರ ಶವಸಂಸ್ಕಾರ ಮಾಡಲಾಗಿದೆ. ಅಲ್ಲದೆ ರಾಜ್ಯದ ವಿವಿಧ ಕಡೆಗಳಲ್ಲಿ 4,367 ಸಸಿಗಳನ್ನು ನೆಡಲಾಗಿದೆ ಎಂದರು.
55,659 ಚುನಾಯಿತ ಪ್ರತಿನಿಧಿಗಳು ಮತ್ತು ಪಕ್ಷದ ಪದಾಧಿಕಾರಿಗಳು ಈ ಸೇವಾ ಕಾರ್ಯಗಳಲ್ಲಿ ಭಾಗವಹಿಸಿದ್ದರು. ಒಟ್ಟು 5,669 ವಾರ್ಡ್‍ಗಳಲ್ಲಿ ಸೇವಾ ಚಟುವಟಿಕೆಗಳು ನಡೆದಿವೆ ಎಂದು ವಿವರ ನೀಡಿದರು.
ಆಶಾ ಕಾರ್ಯಕರ್ತೆಯರಿಗೆ ಸನ್ಮಾನ:
ಕೋವಿಡ್-19ಗೆ ಕುರಿತಂತೆ 12 ರೀತಿಯ ವಿಶೇಷ ಸೇವಾ ಚಟುವಟಿಕೆಗಳು ನಡೆದಿವೆ. ಆಶಾ ಕಾರ್ಯಕರ್ತೆಯರಿಗೆ ಸನ್ಮಾನ, ಕೋವಿಡ್ ರೋಗಿಗಳ ಕುಟುಂಬಗಳಿಗೆ ಊಟ, ಆಕ್ಸಿಜನ್ ಕಾನ್ಸ್ನ್ಟ್ರೇಟರ್ ವಿತರಣೆ, ತಮಟೆ ಜಾಗೃತಿ, ಧ್ವನಿವರ್ಧಕಗಳ ಮೂಲಕ ಆಟೋದಲ್ಲಿ ಜಾಗೃತಿ, ಗ್ರಾಮಗಳಲ್ಲಿ ಸ್ಯಾನಿಟೈಸರ್ ಸಿಂಪಡಿಸುವ ಕಾರ್ಯ, ಉಚಿತ ಆ್ಯಂಬುಲೆನ್ಸ್ ಸೇವೆ, ಶವಸಂಸ್ಕಾರ, ಕೋವಿಡ್ ವಾರಿಯರ್ಸ್‍ಗಳಿಗೆ ರೇಷನ್ ಕಿಟ್, ಟ್ಯಾಕ್ಸಿ /ಆಟೋ/ಕಟ್ಟಡ ಕಾರ್ಮಿಕರಿಗೆ ರೇಷನ್ ಕಿಟ್, ಪಿಪಿಇ ಕಿಟ್, ಔಷಧಿ ಕಿಟ್ ವಿತರಣೆ, ಪ್ರಾಣಿಗಳಿಗೆ ಆಹಾರ ವಿತರಣೆ (ಬೀದಿ ನಾಯಿಗಳು, ಹಸುಗಳು, ಪಕ್ಷಿಗಳು) ಮತ್ತು ಪೌರಕಾರ್ಮಿಕರಿಗೆ ಮತ್ತು ಮಂಗಳಮುಖಿ ಮಹಿಳೆಯರಿಗೆ ರೇಷನ್ ಕಿಟ್ ಮತ್ತು ಧನ ಸಹಾಯ ವಿತರಣೆ- ಹೀಗೆ ಸೇವಾ ಕಾರ್ಯಗಳನ್ನು ನಡೆಸಲಾಗಿದೆ ಎಂದರು.
ಚೀನಾದಿಂದ ಬಂದ ವೈರಸ್‍ನಿಂದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ವ್ಯವಸ್ಥೆಯನ್ನು ಆತಂಕಕ್ಕೆ ಈಡು ಮಾಡಿದೆ. ಶಿಕ್ಷಣದ ವಿಚಾರದಲ್ಲಿ ತಂದೆ - ತಾಯಿ ಚಿಂತಾಕ್ರಾಂತರಾಗಿದ್ದಾರೆ. ಇಡೀ ಶಿಕ್ಷಣ ಕ್ಷೇತ್ರದಲ್ಲಿ ಮಕ್ಕಳೂ ಕೂಡ ಚಿಂತೆಗೀಡಾಗಿದ್ದಾರೆ. ಆರ್ಥಿಕ ವ್ಯವಸ್ಥೆ ಕೋಟ್ಯಂತರ ಜನರ ಮೇಲೆ ಹೊಡೆತ ನೀಡಿದೆ. ಕೈಗಾರಿಕಾ ಕ್ಷೇತ್ರದಲ್ಲೂ ನಿರುದ್ಯೋಗ ತಾಂಡವವಾಡುತ್ತಿದೆ ಎಂದರು.
’ವಾರಿಯರ್ಸ್‍ಗಳಿಗೆ ಆತ್ಮಸ್ಥೈರ್ಯ ತುಂಬಿದ್ದೇವೆ’
ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥ್ ನಾರಾಯಣ ಮಾತನಾಡಿ, ಪೋಷಕರು ಕೋವಿಡ್‍ನಿಂದ ಬಳಲುವ ಸಂದರ್ಭದಲ್ಲಿ ಮಕ್ಕಳ ರಕ್ಷಣಾ ಕಾರ್ಯ, ಇಡೀ ಕುಟುಂಬ ತೊಂದರೆಗೆ ಸಿಲುಕಿದ ಸಂದರ್ಭದಲ್ಲಿ ಆ ಕುಟುಂಬಕ್ಕೆ ಅಗತ್ಯ ನೆರವು, ವೈದ್ಯರು ಸೇರಿದಂತೆ ಕೊರೊನಾ ವಾರಿಯರ್ಸ್‍ಗೆ ಆತ್ಮಸ್ಥೈರ್ಯ ತುಂಬುವ ಕಾರ್ಯ ಮಾಡಲಾಗಿದೆ ಎಂದು ತಿಳಿಸಿದರು.
ಕೆಲವು ಜನರಿಗೆ ಹಣದ ಸಹಾಯವನ್ನೂ ಮಾಡಿದ್ದೇವೆ. ಕೆಲವೊಂದು ಟೀಕೆ ಟಿಪ್ಪಣಿ ಬಂದಿದೆ. ವಿರೋಧ ಪಕ್ಷದವರು ಕೇವಲ ಟೀಕೆ ಟಿಪ್ಪಣಿಗಳಿಗೇ ತಮ್ಮ ಕೆಲಸವನ್ನು ಸೀಮಿತಗೊಳಿಸಬಾರದು. ಉತ್ತಮ ಕಾರ್ಯಗಳನ್ನು ಮೆಚ್ಚುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಕಾಂಗ್ರೆಸ್‍ನ ಮುಖಂಡರಾದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ಕೆಲಸಗಳು ಟೀಕೆ ಮತ್ತು ಆರೋಪ ಮಾಡುವ ಸುದ್ದಿಗೋಷ್ಠಿ ಮತ್ತು ಟ್ವಿಟರ್ ಹೇಳಿಕೆಗೆ ಸೀಮಿತವಾಗಿದೆ. ಅವರು ಸೇವೆ ಮಾಡಲು ಕಾರ್ಯಕರ್ತರಿಗೆ ಕರೆ ನೀಡಬೇಕಿತ್ತು ಎಂದರು. ಆದರೆ, ಬಿಜೆಪಿ ಕಾರ್ಯಕರ್ತರು ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಕನಕಪುರದಲ್ಲಿ 450 ಬಾಟಲಿ ರಕ್ತ ಮತ್ತು ರಾಮನಗರ ಜಿಲ್ಲೆಯಲ್ಲಿ ಒಟ್ಟು 1,500ಕ್ಕೂ ಹೆಚ್ಚು ಬಾಟಲಿ ರಕ್ತ ಸಂಗ್ರಹಿಸಿ ಬ್ಲಡ್ ಬ್ಯಾಂಕ್‍ಗಳಿಗೆ ನೀಡಲಾಗಿದೆ. ಕೋವಿಡ್ ಅಂತ್ಯ ಆಗುವವರೆಗೆ ಇಂಥ ಸೇವಾಕಾರ್ಯ ಮುಂದುವರಿಯಲಿದೆ ಎಂದು ಅವರು ತಿಳಿಸಿದರು.