ಬೆಂಗಳೂರು: ಬಿಜೆಪಿಯಲ್ಲಿದ್ದ ಮಾಜಿ ಮೇಯರ್ ಶಾರದಮ್ಮ, ಪದ್ಮಾವತಿ ನರಸಿಂಹಮೂರ್ತಿ, ಗೋಪಾಲಕೃಷ್ಣ, ನರಸಿಂಹಮೂರ್ತಿ ಸೇರಿದಂತೆ ದಾಸರಹಳ್ಳಿ ಕ್ಷೇತ್ರದ 15ಕ್ಕೂ ಹೆಚ್ಚು ಮುಖಂಡರು ಇಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ಗೆ ಸೇರ್ಪಡೆಯಾದರು. ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಕಾರ್ಯಕ್ರಮ ಜರುಗಿತು.
ಬಾವುಟ ನೀಡುವ ಮೂಲಕ ಮುಖಂಡರನ್ನು ಪಕ್ಷಕ್ಕೆ ಬರ ಮಾಡಿಕೊಂಡ ಕುಮಾರಸ್ವಾಮಿ ಎಲ್ಲರಿಗೂ ಧನ್ಯವಾದ ತಿಳಿಸಿದರು. ಶಾರದಮ್ಮ ಅವರು ಈ ಹಿಂದೆ ಜೆಡಿಎಸ್ನಲ್ಲೇ ಇದ್ದರು. ಕೆಲ ಕಾರಣಾಂತರದಿಂದ ಪಕ್ಷ ಬಿಟ್ಟು ಬಿಜೆಪಿಗೆ ತೆರಳಿದ್ದರು. ಇದೀಗ ಮತ್ತೆ ಜೆಡಿಎಸ್ಗೆ ಮರಳಿದ್ದಾರೆ. ಈ ವೇಳೆ ದಾಸರಹಳ್ಳಿ ಕ್ಷೇತ್ರದ ಶಾಸಕ ಮಂಜುನಾಥ್, ಶಾಸಕ ಗೌರಿಶಂಕರ್ ಮತ್ತಿತರರು ಹಾಜರಿದ್ದರು.
ಕೋರ್ ಕಮಿಟಿ ಸಭೆ: ನಂತರ ಜೆಡಿಎಸ್ ಉಪ ನಾಯಕ ಬಂಡೆಪ್ಪ ಕಾಶೆಂಪೂರ್ ಅಧ್ಯಕ್ಷತೆಯಲ್ಲಿ ಕೋರ್ ಕಮಿಟಿ ಸಭೆ ನಡೆಯಿತು. ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ, ಮಾಜಿ ಸಚಿವ ಎನ್. ಎಂ. ನಬಿ, ಮಾಜಿ ಸಂಸದ ಕುಪೆಂದ್ರ ರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ಕೆ.ಎನ್ ತಿಪ್ಪೇಸ್ವಾಮಿ ಸೇರಿದಂತೆ ಹಲವರು ಸಭೆಯಲ್ಲಿ ಹಾಜರಿದ್ದರು.
ಸಭೆಯಲ್ಲಿ ಜನತಾ ಜಲಧಾರೆ ಸಮಾರೋಪ ಕಾರ್ಯಕ್ರಮದ ಬಗ್ಗೆ ಚರ್ಚೆ ನಡೆಯಿತು. ಇದರ ಜೊತೆಗೆ ಮುಂಬರುವ ಚುನಾವಣಾ ಸಿದ್ಧತೆ, ಸದಸ್ಯತ್ವ ನೋಂದಣಿ ಅಭಿಯಾನ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗ್ತಿದೆ.
ಸಭೆಗೆ ಗೈರು: ನೂತನವಾಗಿ ಜೆಡಿಎಸ್ ರಾಜ್ಯಾಧ್ಯಕ್ಷರಾದ ಸಿ.ಎಂ. ಇಬ್ರಾಹಿಂ ಹಾಗೂ ಮಾಜಿ ರಾಜ್ಯಾಧ್ಯಕ್ಷ ಹೆಚ್.ಕೆ ಕುಮಾರಸ್ವಾಮಿ ಕೋರ್ ಕಮಿಟಿ ಸಭೆಗೆ ಗೈರಾಗಿದ್ದರು. ಅವರು ಸಭೆಗೆ ಬಾರದಿರಲು ಕಾರಣ ತಿಳಿದುಬಂದಿಲ್ಲ. ಆದರೆ, ಹೆಚ್.ಕೆ ಕುಮಾರಸ್ವಾಮಿ ಅವರು ಬೇಸರದಿಂದಲೇ ರಾಜ್ಯಾಧ್ಯಕ್ಷ ಹುದ್ದೆಯಿಂದ ಕೆಳಗಿಳಿದರು ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿಬಂದಿದ್ದವು. ಆ ಕಾರಣದಿಂದ ಅವರು ಗೈರಾದರೆ ಎಂಬ ಪ್ರಶ್ನೆ ಮೂಡಿದೆ.
ಇದನ್ನೂ ಓದಿ: ಪಿಎಸ್ಐ ಪರೀಕ್ಷೆ ಅಕ್ರಮದಲ್ಲಿ ಪ್ರಭಾವಿಗಳ ತಲೆದಂಡವಾಗಲಿ: ರಮೇಶ್ ಜಾರಕಿಹೊಳಿ