ಬೆಂಗಳೂರು: ರಾಜ್ಯಾದ್ಯಂತ ದ್ವಿತೀಯ ಪಿಯು ಫಲಿತಾಂಶ ಜುಲೈ 20ರೊಳಗೆ ಪ್ರಕಟಿಸಲು ಪಿಯು ಬೋರ್ಡ್ ಸಿದ್ದತೆ ನಡೆಸಿದೆ. ಇದಕ್ಕಾಗಿ 10ನೇ ತರಗತಿ ಮತ್ತು ಪ್ರಥಮ ಪಿಯು ಫಲಿತಾಂಶ ವೀಕ್ಷಿಸಲು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿದೆ.
2020-21ನೇ ಸಾಲಿನಲ್ಲಿ ದಾಖಲಾಗಿರುವ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ತಾವು ಗಳಿಸಿರುವ 10ನೇ ತರಗತಿ ಹಾಗೂ ಪ್ರಥಮ ಪಿಯುಸಿ ಅಂಕಗಳನ್ನು https://sts.karnataka.gov.in/SATSPU/ ಇಲ್ಲಿ ವೀಕ್ಷಣೆಗೆ ಇಲಾಖೆ ಅವಕಾಶ ಕಲ್ಪಿಸಿದೆ. ವಿದ್ಯಾರ್ಥಿಗಳು ತಮ್ಮ SATS ನಂಬರ್ ಅಥವಾ ವಿದ್ಯಾರ್ಥಿ ಸಂಖ್ಯೆ ಅಥವಾ Enrollment No ಈ ಮೂರರಲ್ಲಿ ಯಾವುದಾದರೂ ಒಂದನ್ನು ನಮೂದಿಸಿ 10ನೇ ತರಗತಿ ಹಾಗೂ ಪ್ರಥಮ ಪಿಯುಸಿ ಅಂಕಗಳನ್ನು ಪ್ರತ್ಯೇಕವಾಗಿ ವೀಕ್ಷಿಸಬಹುದು.
ವಿದ್ಯಾರ್ಥಿಗಳು SATS ನಂಬರ್ ಅನ್ನು ಎಸ್ಎಸ್ಎಲ್ಸಿ ಅಂಕಪಟ್ಟಿಯಲ್ಲಿ ಅಥವಾ ವರ್ಗಾವಣೆ ಪ್ರಮಾಣ ಪತ್ರದಲ್ಲಿ ಲಭ್ಯವಿರುತ್ತದೆ. ಹೀಗೆ ತಮ್ಮ ಅಂಕಗಳ ಪರಿಶೀಲನಾ ಸಂದರ್ಭದಲ್ಲಿ ಒಂದು ವೇಳೆ ಏನಾದರೂ ಅಂಕಗಳಲ್ಲಿ ವ್ಯತ್ಯಾಸ ಕಂಡು ಬಂದಲ್ಲಿ ತಮ್ಮ ಕಾಲೇಜಿನ ಪ್ರಾಂಶುಪಾಲರಿಗೆ ಜುಲೈ 12ರ ಒಳಗಾಗಿ ಸಂಪರ್ಕಿಸಿ, ಸರಿಪಡಿಸಿಕೊಳ್ಳಲು ಸೂಚಿಸಿದೆ.
ಇಂದಿನಿಂದ ಜುಲೈ 10ರೊಳಗೆ ವೀಕ್ಷಿಸಲು ಅವಕಾಶ ಕಲ್ಪಿಸಿದ್ದು, ನಂತರ ಈ ಲಿಂಕ್ ಅನ್ನು ನಿಷ್ಕ್ರಿಯಗೊಳಿಸಲಾಗುತ್ತೆ. ನಂತರ ಪ್ರಾಂಶುಪಾಲರು ದಾಖಲಿಸಿರುವ ಅಂಕಗಳು ಅಂತಿಮ ಎಂದು ಪರಿಗಣಿಸಲಾಗುತ್ತೆ ಎಂದು ಮಂಡಳಿ ತಿಳಿಸಿದೆ.