ಬೆಂಗಳೂರು : ಉಂಗುರ ನುಂಗಿದ ಪರಿಣಾಮ ಗಂಟಲಿನಲ್ಲಿ ಸಿಲುಕಿ ಉಸಿರಾಟದ ಸಮಸ್ಯೆಗೆ ತುತ್ತಾಗಿದ್ದ ಮಗುವನ್ನು ಎಂಡೋಸ್ಕೋಪ್ ಮೂಲಕ ನಗರದ ರೈನ್‍ಬೋ ಮಕ್ಕಳ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಉಂಗುರವನ್ನು ಹೊರ ತೆಗೆದಿದ್ದಾರೆ.
ಮಗು ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಉಂಗುರ ನುಂಗಿತ್ತು. ಪೋಷಕರು ಮಗುವಿನ ಗಂಟಲಿನಲ್ಲಿ ಸಿಲುಕಿದ್ದ ಉಂಗುರವನ್ನು ಹೊರತೆಗೆಯಲು ಮಾಡಿದ ಪ್ರಯತ್ನಗಳೆಲ್ಲ ವಿಫಲಗೊಂಡವು. ಇದರಿಂದ ಆತಂಕಕ್ಕೊಳಗಾದ ಅವರು ಮಗುವನ್ನು ಕೂಡಲೇ ಬನ್ನೇರುಘಟ್ಟ ರಸ್ತೆಯಲ್ಲಿರುವ ರೈನ್‍ಬೋ ಮಕ್ಕಳ ಆಸ್ಪತ್ರೆಗೆ ಕರೆ ತಂದಿದ್ದಾರೆ. ಮಗುವನ್ನು ಎಕ್ಸ್-ರೇಗೆ ಒಳಪಡಿಸಿದಾಗ ಉಂಗುರವು ನ್ಯಾಸೋಫಾರ್ನೆಕ್ಸ್ನಲ್ಲಿ ಪರಿಣಾಮ ಬೀರಿರುವುದು ದೃಢವಾಯಿತು.
ಈ ಕುರಿತು ನವಜಾತ ಶಿಶುತಜ್ಞರಾದ ಬಿ ಜಿ ಶಂಕರ್ ಮಾತನಾಡಿ “ಮಗುವನ್ನು ಆಸ್ಪತ್ರೆಗೆ ತಂದಾಗ ಉಸಿರಾಟದ ಸಮಸ್ಯೆ ಎದುರಿಸುತ್ತಿತ್ತು. ಕೂಡಲೇ ಆಸ್ಪತ್ರೆಯ ಅರಿವಳಿಕೆ ತಂಡ ಉಂಗುರ ಗಂಟಲಿನಿಂದ ಕೆಳಭಾಗಕ್ಕೆ ಇಳಿಯದಂತೆ ತಡೆದರು. ಎಂಡೋಸ್ಕೋಪಿಕ್ ಮೂಲಕ ವಿಶುವಲೈಸೇಷನ್ ಸಹಾಯದಿಂದ ಉಂಗುರವನ್ನು ಹೊರತೆಗೆಯಲು ಸಾಧ್ಯವಾಯಿತು. ಸದ್ಯ ಮಗುವಿನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಕೆಲಗಂಟೆಗಳ ನಂತರ ಡಿಸ್ಚಾರ್ಜ್ ಮಾಡಲಾಯಿತು.
![1-year old boy](https://etvbharatimages.akamaized.net/etvbharat/prod-images/7835920_thumbn.jpg)
'ಮಗು ಉಂಗುರ ನುಂಗಿದ ಘಟನೆಯನ್ನು ಜೀವಮಾನದವರೆಗೂ ಮರೆಯಲು ಸಾಧ್ಯವಾಗುವುದಿಲ್ಲ. ರೈನ್‍ಬೋ ಆಸ್ಪತ್ರೆಯ ಡಾ.ಶಂಕರ್ ಮತ್ತು ತಂಡಕ್ಕೆ ಕೃತಜ್ಞತೆಗಳು. ಇಂತಹ ಜಟಿಲ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಿದ ವೈದ್ಯರಿಗೆ ನಾವು ಸದಾ ಆಭಾರಿ' ಎನ್ನುತ್ತಾರೆ ಮಗುವಿನ ಪೋಷಕರಾದ ಮುಖೇಶ್ ಕುಮಾರ್ ಪಾಂಡೆ.
ಆಸ್ಪತ್ರೆಯ ಮುಖ್ಯಸ್ಥರಾದ ನೀರಜ್ ಲಾಲ್ ಮಾತನಾಡಿ 'ಮಕ್ಕಳ ಕೈಗೆ ಸಣ್ಣ ವಸ್ತುಗಳು ಸಿಗದಂತೆ ಪ್ರತಿಯೊಬ್ಬರು ಎಚ್ಚರ ವಹಿಸಬೇಕು. ಒಂದು ವೇಳೆ ಸಣ್ಣ ವಸ್ತುಗಳು ಮಕ್ಕಳ ಮೂಗು, ಗಂಟಲು ಅಥವಾ ಕಿವಿಯಲ್ಲಿ ಸಿಲುಕಿದ್ರೆ ಜೀವಕ್ಕೇ ಆಪತ್ತು ತಪ್ಪದು.. ಇಂತಹ ಅಪಾಯಗಳನ್ನು ತಪ್ಪಿಸಲು ಆಸ್ಪತ್ರೆಯಲ್ಲಿ ಗುಣಮಟ್ಟದ ತರಬೇತಿ ಪಡೆದ ವೈದ್ಯರು ಮತ್ತು ಅರಿವಳಿಕೆ ತಂಡವು ಸದಾ ಸಜ್ಜಾಗಿರುತ್ತದೆ. ಮಹಿಳೆಯರು ಮತ್ತು ಮಕ್ಕಳ ಆರೈಕೆಯಲ್ಲಿ ನಾವು ಉತ್ತಮ ಪರಿಣಿತಿ ಹೊಂದಿದ್ದೇವೆ” ಎಂದು ತಿಳಿಸಿದರು.