ಬೆಂಗಳೂರು: ವಿಶ್ವ ಬಿದಿರು ದಿನದ ನಿಮಿತ್ತ 2,500 ಹೆಕ್ಟೇರ್ ರೈತರ ಪ್ರದೇಶದಲ್ಲಿ ಬಿದಿರು ಬೆಳೆಸಲು ಮುಂದಾಗಿದ್ದು, ಪ್ರತಿ ಹೆಕ್ಟೇರಿಗೆ 50 ಸಾವಿರ ಬೆಂಬಲ ಬೆಲೆ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದರು.
ಬೆಂಗಳೂರಿನ ಅಗರಕೆರೆಯಲ್ಲಿ ಸಿಎಂ ಯಡಿಯೂರಪ್ಪ ವೃಕ್ಷೋತ್ಸವಕ್ಕೆ ಚಾಲನೆ ನೀಡಿ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ನಿಮಿತ್ತ ಅಶ್ವತ್ಥ್ ಗಿಡ ನೆಟ್ಟು ಮಾತನಾಡಿದರು.
ಅರಣ್ಯಗಳು ಜಲಸಂರಕ್ಷಣೆಯ ವಿಚಾರದಲ್ಲಿ ಮಹತ್ತರವಾದ ಪಾತ್ರ ವಹಿಸಿದೆ. ಹೀಗಾಗಿ ನೀರಿಗಾಗಿ ಅರಣ್ಯಗಳನ್ನು ಕಾಪಾಡಬೇಕಾಗಿದೆ. ಈ ನಿಟ್ಟಿನಲ್ಲಿ ಸದ್ಗುರು ನೇತೃತ್ವದಲ್ಲಿ ನಡೆಯುತ್ತಿರುವ 'ಕಾವೇರಿ ಕೂಗು' ಅಭಿಯಾನಕ್ಕೆ ಅರಣ್ಯ ಇಲಾಖೆ ಎರಡು ಕೋಟಿ ಸಸಿಗಳನ್ನು ನೀಡಿದೆ. ಅಷ್ಟೇ ಅಲ್ಲದೆ, ವೃಕ್ಷೋದ್ಯಾನವನ್ನು ರಾಜ್ಯಾದ್ಯಂತ ಮುಂದುವರಿಸಲಾಗುವುದು ಎಂದರು.
ವೃಕ್ಷಗಳನ್ನು ನೆಟ್ಟು ಅದನ್ನು ಪೋಷಿಸುವುದು ಮಾನವಕುಲದ ಆದ್ಯ ಕರ್ತವ್ಯವಾಗಿದೆ. ಭೂಮಿತಾಯಿ ಹಸಿರುಗೊಳಿಸಲು ನಮ್ಮನ್ನು ನಾವು ಸಮರ್ಪಿಸಿಕೊಳ್ಳಬೇಕು. ಹಾಗೆಯೇ ಪ್ಲಾಸ್ಟಿಕ್ಗೆ ಪರ್ಯಾಯವಾಗಿ ಬಳಸಬಹುದಾದ ವಸ್ತುಗಳಿಗೆ ಉತ್ತೇಜನ ನೀಡಲಾಗುವುದು ಎಂದರು.
ಅಗರಕೆರೆ ಅಭಿವೃದ್ಧಿಗಾಗಿ ಶಾಸಕರ ನಿಧಿಗೆ ಐದು ಕೋಟಿ ರೂಪಾಯಿ ನೀಡಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಈ ವೇಳೆ ತಿಳಿಸಿದರು.