ಹೊಸಕೋಟೆ : ಶಾಸಕ ಶರತ್ ಬಚ್ಚೇಗೌಡ ಕಾಂಗ್ರೆಸ್ ಸೇರುವ ಬಗ್ಗೆ ಮಾತುಕತೆಯಾಗಿದೆ. ಮದುವೆ ಆಗುವುದಷ್ಟೇ ಬಾಕಿ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಕ್ಷೇತ್ರದ ಗ್ರಾಮ ಪಂಚಾಯತ್‌ಗಳಲ್ಲಿ ಜಯಗಳಿಸಿದ ಮತ್ತು ಪರಾಜಿತರಾದ ಎಲ್ಲಾ ಸ್ವಾಭಿಮಾನಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸ್ವಾಭಿಮಾನಿ ಪಕ್ಷದಿಂದ ಜಯಗಳಿಸಿದ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಕಾಂಗ್ರೆಸ್ ಪಕ್ಷದವರಾಗಿದ್ದು, ಅಧಿಕೃತ ಸೇರ್ಪಡೆಯಾಗುವುದಷ್ಟೇ ಬಾಕಿ ಎಂದರು.
ಶರತ್ ಬಚ್ಚೇಗೌಡರನ್ನ ಕಾಂಗ್ರೆಸ್ ಬರಮಾಡಿಕೊಳ್ಳಲು ಎಲ್ಲರೂ ಒಗ್ಗಟ್ಟಿನಿಂದ ಒಪ್ಪಿಕೊಂಡಿದ್ದು, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಇವರನ್ನು ಒಟ್ಟಾಗಿ ಸೇರಿಸಿ ಬೃಹತ್ ಸಮಾವೇಶ ಮಾಡಲು ತೀರ್ಮಾನಿಸಿದ್ದೇವೆ ಎಂದರು.
ಶಾಸಕ ರಿಜ್ವಾನ್ ಅರ್ಷದ್ ಮಾತನಾಡಿ, ಹೊಸಕೋಟೆ ತಾಲೂಕಿನ 26 ಗ್ರಾಮ ಪಂಚಾಯತ್‌ಗಳಲ್ಲಿ 23 ಗ್ರಾಪಂ ಸ್ವಾಭಿಮಾನಿ ಕಾಂಗ್ರೆಸ್ ತೆಕ್ಕೆಗೆ ಬಂದಿವೆ. ಶಾಸಕ ಶರತ್ ಬಚ್ಚೇಗೌಡ ಕಾಂಗ್ರೆಸ್ ಸೇರ್ಪಡೆಯಾದ ನಂತರ ಎಂಟಿಬಿ ಹೊಸಕೋಟೆ ಬಿಡ ಬೇಕಾಗುತ್ತದೆ ಎಂದು ಲೇವಡಿ ಮಾಡಿದರು.
60 ವರ್ಷಗಳಿಂದಲು ಕಾಂಗ್ರೆಸ್ ವಿರೋದಿಸಿಕೊಂಡು ಬಂದಿದ್ದ ಬಚ್ಚೇಗೌಡ ಕುಟುಂಬದಲ್ಲಿ ತಂದೆ ಬಿಜೆಪಿ ಪಕ್ಷದ ಸಂಸದರಾಗಿದ್ದರೆ, ಸ್ವಾಭಿಮಾನಿ ಪಕ್ಷದಿಂದ ಗೆದ್ದಿರುವ ಮಗ ಶರತ್ ಬಚ್ಚೇಗೌಡ ಇದೀಗ ಕಾಂಗ್ರೆಸ್ ಪಕ್ಷಕ್ಕೆ ಕಾಲಿರಿಸಿದ್ದು, ಒಂದೇ ಮನೆಯಲ್ಲಿ ಎರಡು ಪಕ್ಷಗಳಾಗಿವೆ. ಅವರ ಬೆಂಬಲಿಗರು ಇದನ್ನು ಹೇಗೆ ಸ್ವಾಗತಿಸುತ್ತಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.