ಹೊಸಕೋಟೆ: ಕೊರೊನಾ ಸಂಕಷ್ಟದ ನಡುವೆ ವರಮಹಾಲಕ್ಷ್ಮಿ ಆಚರಣೆಗೆ ವಿವಿಧ ವಸ್ತುಗಳನ್ನ ಖರೀದಿಸಲು ಜನ ಮುಗಿಬಿದ್ದಿದ್ದಾರೆ. ಮಹದೇವಪುರ, ಕೆಆರ್ ಪುರ ಮತ್ತು ಹೊಸಕೋಟೆ ಜನರು ಹಬ್ಬಕ್ಕೆ ಭರದ ಸಿದ್ಧತೆ ನಡೆಸಿದ್ದು, ಅಗತ್ಯ ವಸ್ತುಗಳ ಖರೀದಿಗೆ ಮುಂದಾಗಿದ್ದಾರೆ.
ಹೂವು, ಬಾಳೆಕಂದು, ಮಾವಿನ ಎಲೆ ಮತ್ತು ಹಣ್ಣುಗಳ ಖರೀದಿ ಮಾಡಲು ಜನ ಮುಂದಾಗಿದ್ದು, ಮಾರುಕಟ್ಟೆ ಸುತ್ತಮುತ್ತಲಿನ ಕೆಲವು ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಕಂಡುಬಂದಿದೆ. ಕೊರೊನಾ ಹಿನ್ನೆಲೆಯಲ್ಲಿ ಮಾರಾಟಗಾರರು ಮತ್ತು ಖರೀದಿದಾರರ ಸಂಖ್ಯೆ ಕಡಿಮೆ ಇದ್ದರೂ ವಸ್ತುಗಳ ಬೆಲೆ ಮಾತ್ರ ಗಗನಕ್ಕೇರಿದೆ. ಹಣ್ಣು, ಹೂವು, ತರಕಾರಿ ಬೆಲೆ ದುಪ್ಪಟ್ಟು ಬೆಲೆಯಾಗಿದೆ. ಹಬ್ಬ ಆಚರಣೆ ಹಿಂದಿನ ವರ್ಷದಷ್ಟು ಸಡಗರ-ಸಂಭ್ರಮ ಕಾಣದಿದ್ದರೂ ಸರಳ ಹಾಗೂ ಸಂಪ್ರದಾಯದಂತೆ ಆಚರಿಸಲು ಜನ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಕೊರೊನಾ ಕಾರಣಕ್ಕೆ ನೆಲ ಕಚ್ಚಿದ ಹೂವುಗಳ ಬೆಲೆ ಗಗನಕ್ಕೇರಿವೆ. ಸಾಮಾನ್ಯವಾಗಿ ಕೆಜಿಗೆ 500 ರಂತೆ ಮಾರಾಟವಾಗುತ್ತಿದ್ದ ಕನಕಾಂಬರ ದುಬಾರಿಯಾಗಿದ್ದು, ಪ್ರತಿ ಕೆ.ಜಿ.ಗೆ 2,000 ಕ್ಕೇರಿದೆ. ಸೇವಂತಿಗೆ, ಮಲ್ಲಿಗೆ, ಗುಲಾಬಿ ಜೊತೆಗೆ ಹಣ್ಣಿನ ದರಗಳು ಏರಿಕೆ ಕಂಡಿವೆ. ಗುಲಾಬಿ ಒಂದು ಕೆ.ಜಿ 200, ಸೇವಂತಿ 200, ಚೆಂಡೂ ಹೂವು 100, ಕಾಕಡಾ 600 ಕ್ಕೆ ಮಾರಾಟವಾಗುತ್ತಿದ್ದು, ಜನ ಸಂಕಷ್ಟದ ಸಮಯದಲ್ಲೂ ಹಬ್ಬ ಮಾಡಲು ಮುಂದಾಗಿದ್ದಾರೆ. ಆದರೆ ಕೋವಿಡ್ ಭೀತಿಯ ನಡುವೆ ಹೂವು ಬೆಳೆದ ರೈತರ ಮೊಗದಲ್ಲಿ ಸಂತಸ ಮೂಡಿದೆ .
ಹಣ್ಣುಗಳ ವ್ಯಾಪಾರಿ ಶಂಕರ್ ಸಿಂಗ್ ಮಾತನಾಡಿ, ಕೊರೊನಾ ಇರುವುದರಿಂದ ಹಣ್ಣುಗಳು ಮಾರುಕಟ್ಟೆಗೆ ಬರುತ್ತಿಲ್ಲ. ಅದರಲ್ಲೂ ಬೆಲೆಗಳು ಸಹ ಸ್ವಲ್ಪ ಜಾಸ್ತಿಯಾಗಿದೆ. ಆಪಲ್ ಕೆಜಿ ಗೆ 220 ರೂಪಾಯಿ, ಮೊಸಂಬಿ 50 ರಿಂದ 80 ರೂಪಾಯಿ, ಪೈನಾಪಲ್ ಒಂದು ಜೋಡಿಗೆ 80, ಕಿತ್ತಳೆಹಣ್ಣು 75, ಮರ ಸೇಬು 100, ದಾಳಿಂಬೆ 120, ಏಲಕ್ಕಿ ಬಾಳೆ ಒಂದು ಕೆಜಿ ಗೆ 60 ಇದ್ದು, ಪಚ್ಚೆ ಬಾಳೆ 30 ರೂಪಾಯಿ ಬೆಲೆಗೆ ಮಾರಾಟವಾಗುತ್ತಿವೆ ಎಂದರು. ಆದರೂ ಸಾರ್ವಜನಿಕರು ಕೊರೊನಾ ಆತಂಕದಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿಲ್ಲ ಎಂದು ಹೇಳಿದರು.