ಆನೇಕಲ್: ಪೊಲೀಸರನ್ನೇ ತಾವಿದ್ದ ಸ್ಥಳಕ್ಕೆ ಕರೆಯಿಸಿಕೊಂಡು ಅವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಸೂರ್ಯನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳೆದ ಏಪ್ರಿಲ್ 19ರಂದು ರಾತ್ರಿ ಬೈಕ್ ಕಳ್ಳತನ ಮಾಡಲು ಯತ್ನಿಸಿದ್ದ ತಂಡ, ಸೂರ್ಯನಗರ ಠಾಣೆಯ ಎಎಸ್ಐ ಶಿವಲಿಂಗ ನಾಯಕ್ ಅವರನ್ನು ತಾವಿದ್ದ ಸ್ಥಳಕ್ಕೆ ಕರೆಯಿಸಿಕೊಂಡು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬಳಿಕ ಪರಾರಿಯಾಗಿದ್ದರು.
ಬೈಕ್ ಕಳ್ಳತನಕ್ಕೆ ಯತ್ನ ಹಾಗೂ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದವರ ಪತ್ತೆಗೆ ಎಸ್ಐ ವಿಕ್ಟರ್ ಸೈಮನ್ ನೇತೃತ್ವದ ತಂಡ ರಚನೆ ಮಾಡಲಾಗಿತ್ತು. ಈ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಎರಡು ತಿಂಗಳ ಬಳಿಕ ಯಶಸ್ವಿಯಾಗಿದೆ. ಟ್ಯಾನಿರೋಡ್ ಮೂಲದ ಸಲ್ಮಾನ್, ಯಾಕುಬ್ ಹಾಗೂ ಹರಾಫತ್ ಅಹಮ್ಮದ್ ಎಂಬ ಮೂವರು ಆರೋಪಿಗಳು ಬಂಧಿತರಾಗಿದ್ದು, ಮತ್ತೊಬ್ಬ ಆರೋಪಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಆರೋಪಿಗಳಿಂದ ಕೃತ್ಯಕ್ಕೆ ಬಳಕೆ ಮಾಡಿದ್ದ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.
ಏಪ್ರಿಲ್ 19ರ ಸಂಜೆ ಕಳ್ಳರು ಬೈಕ್ ಕದಿಯಲು ಯತ್ನಿಸುತ್ತಿದ್ದರು. ಇದನ್ನು ಗಮನಿಸಿದ ಸಾರ್ವಜನಿಕರು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಠಾಣೆಯ ಎಎಸ್ಐ ಶಿವಲಿಂಗ್ ನಾಯಕ್ ಸ್ಥಳಕ್ಕೆ ಧಾವಿಸಿದಾಗ ಬೈಕ್ ಕದಿಯಲು ಯತ್ನಿಸುತ್ತಿದ್ದವರು ಪರಾರಿಯಾಗುತ್ತಾರೆ. ತಮ್ಮ ಕೃತ್ಯಕ್ಕೆ ಅಡ್ಡಿಯಾದ ಪೊಲೀಸ್ ಅಧಿಕಾರಿ ನಾಯಕ್ ಅವರ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾಗುತ್ತಾರೆ.
''ಚಂದಾಪುರ- ಬೆಂಗಳೂರು ಹೆದ್ದಾರಿ 7ರ ಪಕ್ಕದ ಕೀರ್ತನಾ ಹೊಟೇಲ್ ಬಳಿ ಬೈಕ್ ಕದಿಯುತ್ತಿದ್ದಾರೆ'' ಎಂದು ಇದೇ ಖದೀಮರು ಪೊಲೀಸ್ ಠಾಣೆಗೆ ಕರೆ ಮಾಡಿ ಅವರನ್ನು ಕರೆಯಿಸಿಕೊಳ್ಳುತ್ತಾರೆ. ಸ್ಥಳಕ್ಕೆ ಬಂದ ಪೊಲೀಸರ ಮೇಲೆ ಸಿನಿಮೀಯ ಶೈಲಿಯಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿ ಆಗುತ್ತಾರೆ. ಕಳ್ಳತನಕ್ಕೆ ಯತ್ನ ಹಾಗೂ ಪೊಲೀಸರ ಮೇಲೆ ಹಲ್ಲೆ ನಡೆಸಿದ ತಂಡವನ್ನು ಎರಡು ತಿಂಗಳ ಬಳಿಕ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಘಟನಾ ಸ್ಥಳದ ಸುತ್ತಲಿನ ಮೊಬೈಲ್ ಟವರ್ ಒಳಬರುವ- ಹೊರಹೋಗುವ ಕರೆಗಳ ವಿವರ ಕಲೆ ಹಾಕಿದಾಗ ಶಂಕಿತ ಆರೋಪಿಗಳ ಪತ್ತೆಹಚ್ಚಲಾಯಿತು. ಶಂಕಿತ ಆರೋಪಿಗಳು ಮಾರಕಾಸ್ತ್ರಗಳನ್ನು ಹಿಡಿದ ಸೆಲ್ಫಿ ಹಾಗೂ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇವರನ್ನೇ ತೀವ್ರ ವಿಚಾರಣೆಗೊಳಪಡಿಸಿದಾಗ ನಡೆಸಿದ ಕೃತ್ಯವನ್ನು ಬಾಯ್ಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.