ದೊಡ್ಡಬಳ್ಳಾಪುರ: ನಿಮಜ್ಜನಗೊಂಡ ಗಣೇಶ ಮೂರ್ತಿಗಳು ನೀರಿನಲ್ಲಿ ಅರ್ಧಂಬರ್ಧ ಕರಗಿ ಕಸದ ರಾಶಿಯಂತೆ ಬಿದ್ದಿತ್ತು. ಈ ಕುರಿತು ಈಟಿವಿ ಭಾರತ್ ನಲ್ಲಿ ಸುದ್ದಿ ಪ್ರಸಾರವಾದ ಹಿನ್ನಲೆ ಗಣೇಶ ಮೂರ್ತಿಗಳ ವಿಲೇವಾರಿಗೆ ದೊಡ್ಡಬಳ್ಳಾಪುರ ನಗರಸಭೆ ಮುಂದಾಗಿದೆ.
ಗಣೇಶೋತ್ಸವ ಸಮಯದಲ್ಲಿ ಗಣೇಶ ಮೂರ್ತಿಗಳ ನಿಮಜ್ಜನಕ್ಕಾಗಿ ದೊಡ್ಡಬಳ್ಳಾಪುರ ನಗರಸಭೆ ತಾತ್ಕಾಲಿಕ ಕಲ್ಯಾಣಿ ನಿರ್ಮಾಣ ಮಾಡಿತ್ತು. ಜನರು ಸಹ ನಗರಸಭೆ ನಿಗದಿ ಮಾಡಿದ ಕಲ್ಯಾಣಿಯಲ್ಲಿ ಗಣೇಶ ಮೂರ್ತಿಗಳನ್ನು ನಿಮಜ್ಜನ ಮಾಡಿದ್ರು. ಗಣೇಶ ಹಬ್ಬ ಮುಗಿದು ಒಂದು ತಿಂಗಳಾದರೂ ವಿಸರ್ಜನೆಯಾದ ಗಣೇಶ ಮೂರ್ತಿಗಳ ವಿಲೇವಾರಿ ಮಾಡಿರಲಿಲ್ಲ.
ಇದರಿಂದ ನೀರಿನಲ್ಲಿ ಅರ್ಧಂಬರ್ಧ ಕರಗಿದ ಗಣೇಶನ ಮೂರ್ತಿಗಳು ಭಕ್ತರ ಭಾವನೆಗೆ ಧಕ್ಕೆ ತಂದಿತ್ತು. ಗಣೇಶ ಮೂರ್ತಿಗಳನ್ನ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಿ ಭಕ್ತರ ಭಾವನೆಗಳಿಗೆ ಗೌರವಕೊಡುವಂತೆ ಹಿಂದೂ ಸಂಘಟನೆಯ ಕಾರ್ಯಕರ್ತರು ಎಚ್ಚರಿಕೆ ನೀಡಿದರು.
ವಿಲೇವಾರಿಗೆ ಮುಂದಾದ ಅಧಿಕಾರಿಗಳು: 'ದೊಡ್ಡಬಳ್ಳಾಪುರದ ಕೆರೆಯಲ್ಲಿ ಅರ್ಧಂಬರ್ಧ ಕರಗಿದ ಗಣೇಶ ಮೂರ್ತಿಗಳು ಪತ್ತೆ.. ಭಕ್ತರಿಗೆ ಬೇಸರ' ಎಂಬ ಶೀರ್ಷಿಕೆಯ ಹೆಸರಿನಲ್ಲಿ ಸೆಪ್ಟೆಂಬರ್ 29 ರಂದು ಈಟಿವಿ ಭಾರತ್ನಲ್ಲಿ ಸುದ್ದಿ ಪ್ರಸಾರವಾಗಿತ್ತು. ಇದರಿಂದ ಎಚ್ಚೆತ್ತ ನಗರಸಭೆ ಅಧಿಕಾರಿಗಳು ಗಣೇಶಮೂರ್ತಿಗಳ ವಿಲೇವಾರಿಗೆ ಮುಂದಾಗಿದ್ದಾರೆ.
ನಗರಸಭೆ ಕಾರ್ಯಕ್ಕೆ ಭಕ್ತರಿಂದ ಮೆಚ್ಚುಗೆ: 15 ಪೌರಕಾರ್ಮಿಕರು, ಒಂದು ಜೆಸಿಬಿ, ಒಂದು ಸಕ್ಕಿಂಗ್ ವಾಹನದ ಮೂಲಕ ವಿಲೇವಾರಿ ಕಾರ್ಯಾಚರಣೆ ನಡೆಸುತ್ತಿದೆ. ಗಣೇಶ ಮೂರ್ತಿಗಳ ತಯಾರಿಕೆಗೆ ಬಳಸಲಾದ ಬಿದಿರು ಮತ್ತು ಸೆಣಬಿನ ಹುಲ್ಲನ್ನು ಗೊಬ್ಬರ ತಯಾರಿಕೆಗಾಗಿ ಕಸ ವಿಲೇವಾರಿ ಘಟಕಕ್ಕೆ ಕಳುಹಿಸಲಾಗಿದೆ. ಕಲ್ಯಾಣಿಯಲ್ಲಿದ್ದ ನೀರನ್ನು ಕೆರೆಗೆ ಸೇರಿದಂತೆ ಸಕ್ಕಿಂಗ್ ವಾಹನದ ಮೂಲಕ ವಿಲೇವಾರಿ ಮಾಡಲಾಗಿದೆ. ನಗರಸಭೆ ವಿಲೇವಾರಿ ಕಾರ್ಯಕ್ಕೆ ಭಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಓದಿ: ದೊಡ್ಡಬಳ್ಳಾಪುರದ ಕೆರೆಯಲ್ಲಿ ಅರ್ಧಂಬರ್ಧ ಕರಗಿದ ಗಣೇಶ ಮೂರ್ತಿಗಳು ಪತ್ತೆ ..ಭಕ್ತರಿಗೆ ಬೇಸರ