ಬೆಂಗಳೂರು : ಶಿವಮೊಗ್ಗ ಯುವಕನ ಕೊಲೆ ಯಾರು ಮಾಡಿದ್ದಾರೆ ಎಂದು ತನಿಖೆ ಮಾಡಿ ಆರೋಪಿಗಳನ್ನು ಹಿಡಿಯುವ ಕೆಲಸ ಸರ್ಕಾರದ್ದು ಎಂದು ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಶಿವಮೊಗ್ಗ ಕೊಲೆ ಪ್ರಕರಣ ಇದು ದುಃಖಕರ ಘಟನೆ. ಯಾರಿಗೂ ಜೀವ ತೆಗೆಯುವ ಅಧಿಕಾರ ಇಲ್ಲ. ಅದನ್ನು ಬಿಟ್ಟು ಈಶ್ವರಪ್ಪ ಪ್ರಚೋದನಾಕಾರಿ ಹೇಳಿಕೆ ನೀಡುತ್ತಿದ್ದಾರೆ. ಕೊಲೆಗಾರರನ್ನು ಹಿಡಿಯುವುದರ ಬದಲು ಬಿಜೆಪಿ ಕಾರ್ಯಕರ್ತರು ಮೆರವಣಿಗೆ ಮಾಡುತ್ತಿದ್ದಾರೆ ಎಂದರು.
ಜವಾಬ್ದಾರಿಯುತ ಸರ್ಕಾರ ಇದ್ದರೆ ಶಾಂತಿ ಕಾಪಾಡುವುದು, ಆರೋಪಿಗಳನ್ನು ಬಂಧಿಸಬೇಕು. ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಸರ್ಕಾರದ್ದು. ಸಚಿವರು ಪ್ರಚೋದನೆಯ ಹೇಳಿಕೆ ನೀಡುವುದು, ಮೆರವಣಿಗೆ ಮಾಡುವುದು ಎಷ್ಟರ ಮಟ್ಟಿಗೆ ಸರಿ? ನಿಮ್ಮ ಉದ್ದೇಶ ಏನು?
ಸಮಾಜವನ್ನು ಎಲ್ಲಿಗೆ ತಲುಪಿಸುತ್ತಿದ್ದೀರಿ. ಯಾವ ಜಾತಿ, ಮತ ಏನೇ ಇರಲಿ ಯಾರಿಗೂ ಯಾವ ಜೀವ ತೆಗೆಯುವ ಅಧಿಕಾರ ಇಲ್ಲ. ನಾವೆಲ್ಲಾ ಶಾಂತಿ, ಸಹೋದರತೆ ಕಾಪಾಡಬೇಕು. ಆಡಳಿತ ಪಕ್ಷದ ಕಾರ್ಯಕರ್ತರು ಮೆರವಣಿಗೆ ಮಾಡಿ ಗಲಾಟೆ ಮಾಡ್ತಾರೆ. ಸಮಾಜದಲ್ಲಿ ಈ ಮಟ್ಟದ ಅಶಾಂತಿಯನ್ನು ಉಂಟು ಮಾಡಬಾರದು ಎಂದು ಸರ್ಕಾರವನ್ನು ದೂರಿದರು.
ಗೃಹ ಸಚಿವರ ಜಿಲ್ಲೆಯಲ್ಲಿ ನಡೆದ ಕೊಲೆ ಆರೋಪಿಗಳನ್ನು ಹಿಡಿಯಲು ಸಾಧ್ಯವಾಗಿಲ್ಲ. ಸರ್ಕಾರದ ಮಂತ್ರಿಗಳು ಪ್ರಚೋದನೆ ಹೇಳಿಕೆ ಕೊಟ್ಟರೆ ಏನು ಸಂದೇಶ ಕೊಡುತ್ತೆ? ಕುಟುಂಬಕ್ಕೆ ಸಾಂತ್ವನ ಹೇಳಬೇಕು, ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಬದಲು ಕಾರ್ಯಕರ್ತರು ಬೀದಿಗೆ ಬಂದು ಗಲಾಟೆ ಮಾಡ್ತಾರೆ.
ಕೊಲೆ ಆಗಿದೆ, ಅದರ ತನಿಖೆ ಆಗಬೇಕು. ಸರ್ಕಾರ ಬಿಜೆಪಿ ಕೈಯಲ್ಲಿದೆ. ತನಿಖೆ ಮಾಡಿ ಸತ್ಯ ಹೊರತನ್ನಿ. ನಿಮ್ಮ ಕಾರ್ಯಕರ್ತರನ್ನು ಬಿಟ್ಟು ಅಶಾಂತಿ ಮೂಡಿಸಿದರೆ ಯಾರಿಗೆ ಸಾಂತ್ವನ ಹೇಳಲು ಸಾಧ್ಯ ಎಂದರು.
ನಿಮ್ಮ ರಾಜಕಾರಣ ಒಂದು ಕಡೆ ಇರಲಿ. ಸಮಾಜಕ್ಕೆ ಬೆಂಕಿ ಇಡುವ ಕೆಲಸ ಆಗಬಾರದರು. ಕೊಲೆ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯಲಿ. ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಜವಾಬ್ದಾರಿ ಸರ್ಕಾರದ್ದು ಎಂದರು.
ಶಿವಮೊಗ್ಗ ಘಟನೆಗೆ ಡಿಕೆಶಿ ಕೊಟ್ಟ ಪ್ರಚೋದನೆಯೇ ಕಾರಣವೆಂಬ ಸಚಿವ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಈ ಬಗ್ಗೆ ಗೃಹ ಸಚಿವರು ಮಾತಡಬೇಕು. ಈಶ್ವರಪ್ಪ ಮಾತಾಡೋದಲ್ಲ. ಶಿವಮೊಗ್ಗದಲ್ಲಿ ನಡೆದ ಘಟನೆಗೆ ಡಿಕೆಶಿ ಕಾರಣವಾಗಿದ್ರೆ ಗೃಹ ಸಚಿವ ಕ್ರಮ ತೆಗೆದುಕೊಳ್ಳಬೇಕಾಗಿತ್ತು. ಈಗ ಮಾತಾಡೋದು ಸರಿಯಿಲ್ಲ ಎಂದರು.
ಇದನ್ನೂ ಓದಿ: ಬಜರಂಗದಳ ಕಾರ್ಯಕರ್ತ ಕೊಲೆ ಪ್ರಕರಣ : ಬೆಂಗಳೂರಿನಿಂದ 200ಕ್ಕೂ ಹೆಚ್ಚು ಪೊಲೀಸರು ಸ್ಥಳಕ್ಕೆ ದೌಡು