ನೆಲಮಂಗಲ(ಬೆಂ.ಗ್ರಾ): ಸರ್ಕಾರಿ ಗೋಮಾಳ ಜಮೀನಿನಲ್ಲಿ ಬೆಳೆದಿದ್ದ ನೀಲಗಿರಿ ಮರಗಳನ್ನು ಕಟಾವು ಮಾಡಿ ಜಮೀನು ಕಬಳಿಸಲು ಕೆಲವರು ಹೊಂಚು ಹಾಕಿದ್ದಾರೆ ಎಂದು ದೂರು ಬಂದ ಹಿನ್ನೆಲೆಯಲ್ಲಿ, ನೆಲಮಂಗಲ ತಹಶೀಲ್ದಾರ್ ಎಂ.ಶ್ರೀನಿವಾಸ ಅವರು ತ್ಯಾಮಗೊಂಡ್ಲು ಹೋಬಳಿಯ ಗುಡ್ಡೇಗೌಡನಚನ್ನವಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯ ಗುಡ್ಡೇಗೌಡಚನ್ನವಳ್ಳಿ ಸರ್ವೆ ನಂಬರ್ 8,12,13 ಮತ್ತು 17 ಸರ್ಕಾರದ ಗೋಮಾಳವಾಗಿದ್ದು, ರಾತ್ರೋ ರಾತ್ರಿ ಅದರಲ್ಲಿದ್ದ ನೀಲಗಿರಿ ಮತ್ತು ಇತರೆ ಮರಗಳನ್ನು ಕೀಳಿಸಿ ಜಮೀನು ಸ್ವಾಧೀನಕ್ಕೆ ಮುಂದಾಗಿದ್ದಾರೆ. ಲಕ್ಷಾಂತರ ಬೆಲೆ ಬಾಳುವ ಮರಗಳು ಕಾಣೆಯಾಗಿದ್ದಾವೆ. ಕಂದಾಯ ಇಲಾಖೆ ಇದನ್ನು ತಡೆಗಟ್ಡವಲ್ಲಿ ವಿಫಲವಾಗಿದೆ ಎಂದು ನೆಲಮಂಗಲದ ಬಿ.ಎಂ.ಟಿ.ಸಿ. ಮಾಜಿ ನಿರ್ದೇಶಕ ಹಾಗೂ ಮಾಜಿ ಸೈನಿಕ ಮಿಲಿಟರಿ ಮೂರ್ತಿ ನೇರವಾಗಿ ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಹರಿಬಿಟ್ಟಿದ್ದರು.
ಇದನ್ನು ಗಮನಿಸಿದ ನೆಲಮಂಗಲ ತಹಶೀಲ್ದಾರ್ ಎಂ.ಶ್ರೀನಿವಾಸ್, ಇಂದು ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ, ಇಲ್ಲಿ ಯಾವುದೇ ಸಾಗುವಳಿ ನಡೆದಿಲ್ಲ. ಜಮೀನು ಮಂಜೂರಾತಿಗೆ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದಲ್ಲಿ, ಅದನ್ನು ಪರಿಶೀಲಿಸಿ, ಶಾಸಕರ ನೇತೃತ್ವದ ಸಮಿತಿಯಲ್ಲಿ ಚರ್ಚಿಸಲಾಗುವುದು. ಅರ್ಜಿ ಸಲ್ಲಿಸಿದ ರೈತರು ಸರ್ಕಾರದ ನಿಯಮಗಳಿಗೆ ಅರ್ಹರಾಗಿದ್ದಲ್ಲಿ ಪರಿಶೀಲಿಸಿ, ಜಮೀನು ಮಂಜೂರು ಮಾಡಲು ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು. ಯಾವುದೇ ಪ್ರಭಾವಗಳಿಗೆ ಬೆದರಿಕೆಗೆ ತಾಲೂಕು ಆಡಳಿತ ತಲೆಬಾಗುವುದಿಲ್ಲ ಹಾಗೂ ಅದಕ್ಕೂ ಮೀರಿ ಜಾಗವನ್ನು ಅತಿಕ್ರಮಿಸಲು ಮುಂದಾದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಥಳದಲ್ಲಿದ್ದ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದರು.