ದೇವನಹಳ್ಳಿ(ಬೆಂಗಳೂರು ಗ್ರಾ): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಾಣವಾಗಿರುವ ಟರ್ಮಿನಲ್ 2 ನಲ್ಲಿ ಮೊದಲ ವಿಮಾನ ಪ್ರಯಾಣ ಇಂದಿನಿಂದ ಆರಂಭಗೊಂಡಿದೆ. ಬೆಂಗಳೂರಿನಿಂದ ಕಲಬುರಗಿಗೆ ಮೊದಲ ವಿಮಾನ ಯಶಸ್ವಿಯಾಗಿ ಹಾರಾಟ ನಡೆಸಿದೆ. ಸ್ಟಾರ್ ಏರ್ಲೈನ್ಸ್ ವಿಮಾನದ ಮೂಲಕ ಮೊದಲ ಪ್ರಯಾಣ ಬೆಳೆಸಿದ ಪ್ರಯಾಣಿಕರಿಗೆ ಶಾಲು ಹೊದಿಸಿ ವಿವಿಧ ಕಲಾತಂಡಗಳ ಮೂಲಕ ವಿಶೇಷವಾಗಿ ಸ್ವಾಗತಿಸಲಾಯಿತು.
ಇಂದು ಹೊಸ ಟರ್ಮಿನಲ್ ಮೂಲಕ ವಿಮಾನವೇರಲು ಬಂದಿದ್ದ ಪ್ರಯಾಣಿಕರಿಗೆ ಆತ್ಮೀಯ ಸ್ವಾಗತ ಕೋರಲಾಯಿತು. ಟರ್ಮಿನಲ್ 2ರಿಂದ ಹೊರಟ ಮೊದಲ ವಿಮಾನ ಸ್ಟಾರ್ ಏರ್‌ಲೈನ್ಸ್ ಕಲಬುರಗಿಗೆ ಒಟ್ಟು 44 ಪ್ರಯಾಣಿಕರನ್ನು ಹೊತ್ತು ಸಾಗಿತು. ಸಿಬ್ಬಂದಿ ಟರ್ಮಿನಲ್ 1ಕ್ಕಿಂತ ಎರಡನೇ ಟರ್ಮಿನಲ್ನಲ್ಲಿ ಹೆಚ್ಚು ಉತ್ಸಾಹದಿಂದ ಕಾರ್ಯನಿರ್ವಹಿಸಿದ್ದು ಕಂಡುಬಂತು. "ಇಂದಿನಿಂದ ಸ್ಟಾರ್ ಏರ್ ವಿಮಾನ ಹಾರಾಟ ನಡೆಸಿದ್ದು, ಹಂತ ಹಂತವಾಗಿ ಬೇರೆ ವಿಮಾನಗಳು ಟರ್ಮಿನಲ್ 2ರಲ್ಲಿ ಆಪರೇಟ್ ಆಗಲಿವೆ" ಎಂದು ವಿಮಾನ ನಿಲ್ದಾಣದ ಸಿಇಒ ಹರಿಮರರ್ ಮಾಹಿತಿ ನೀಡಿದರು.
ಟರ್ಮಿನಲ್ 2 ಅತ್ಯಾಧುನಿಕ ತಂತ್ರಜ್ಞಾನ ಸೇರಿದಂತೆ ಹಲವು ವಿಶೇಷತೆಗಳನ್ನು ಹೊಂದಿದ್ದು ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು. ಆದರೆ ಟರ್ಮಿನಲ್‌ನ ಕೆಲಸಗಳು ಬಾಕಿ ಇದ್ದ ಕಾರಣ ಕಾರ್ಯಾರಂಭಿಸಿರಲಿಲ್ಲ.
ಸಾವಿರಾರು ಕೋಟಿ ಖರ್ಚು, ಸಾಕಷ್ಟು ವಿಶೇಷತೆ: ನೂತನವಾಗಿ ನಿರ್ಮಾಣವಾಗಿರುವ ಟರ್ಮಿನಲ್ ಅನ್ನು ಸುಮಾರು 13,000 ಕೋಟಿ ರೂಪಾಯಿ ವೆಚ್ಚದಲ್ಲಿ ಸಿದ್ಧಪಡಿಸಲಾಗಿದೆ. ಟರ್ಮಿನಲ್ 2ರ 1ನೇ ಹಂತವನ್ನು 5,000 ಕೋಟಿ ರೂಪಾಯಿ ವ್ಯಯಿಸಿ ನಿರ್ಮಿಸಲಾಗಿದೆ. ಟರ್ಮಿನಲ್ 2ರಲ್ಲಿ ಕಲೆ ಮತ್ತು ಅಲಂಕಾರದ ಆಕರ್ಷಕ ಅಂಶಗಳೊಂದಿಗೆ ಕರ್ನಾಟಕದ ಶ್ರೀಮಂತ ಸಂಸ್ಕೃತಿ, ಪರಂಪರೆಯನ್ನು ತೋರಿಸಲಾಗಿದೆ. ಇವೆಲ್ಲವನ್ನೂ ಇಂದಿನಿಂದ ಪ್ರಯಾಣಿಕರು ವೀಕ್ಷಿಸಬಹುದು.
ಪ್ರಾರಂಭದಲ್ಲಿ ಟರ್ಮಿನಲ್ 2 ದೇಶಿಯ ವಿಮಾನಗಳ ಹಾರಾಟಕ್ಕೆ ಮಾತ್ರ ಸೀಮಿತವಾಗಿದೆ. ಶೀಘ್ರದಲ್ಲೇ ಏರ್ ಏಷ್ಯಾ, ಏರ್ ಇಂಡಿಯಾ, ವಿಸ್ತಾರ ಸೇರಿದಂತೆ ಹಲವು ವಿಮಾನಯಾನ ಸಂಸ್ಥೆಗಳು ಕೂಡ ಟರ್ಮಿನಲ್ 2ರಲ್ಲಿ ಹಾರಾಟ ನಡೆಸಲಿವೆ. ನೋಡಲು ಅತ್ಯಂತ ಸುಂದರವಾಗಿರುವ ಟರ್ಮಿನಲ್ ಅನ್ನು ವಿಶಿಷ್ಟವಾಗಿ ಉದ್ಯಾನವನದಂತೆ ವಿನ್ಯಾಸಗೊಳಿಸಲಾಗಿದೆ. ವಿವಿಧ ಕಲಾಕೃತಿಗಳು, ಉದ್ಯಾನವನ, ಜಲಪಾತಗಳಿಂದ ಸಿಂಗಾರಗೊಳಿಸಲಾಗಿದೆ. ನಿಲ್ದಾಣದೊಳಗೆ ಛಾವಣಿ, ಮೆಟ್ಟಿಲು, ಕಂಬ, ರೇಲಿಂಗ್ಗಳಲ್ಲಿಯೂ ಬಿದಿರಿನ ಬಳಕೆ ಯಥೇಚ್ಛವಾಗಿದೆ.
ಹೊಸ ಟರ್ಮಿನಲ್ ಯಾಕೆ?: ಭಾರತದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಎರಡನೇ ಅತಿ ದೊಡ್ಡ ವಿಮಾನ ನಿಲ್ದಾಣವೆಂದರೆ ಅದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ಈ ಟರ್ಮಿನಲ್ ಅನ್ನು ಆಧುನಿಕ ತಂತ್ರಜ್ಞಾನ ಬಳಸಿಕೊಂಡು ರಚಿಸಲಾಗಿದೆ. ಟರ್ಮಿನಲ್ 1 ರಲ್ಲಿ ವರ್ಷದಲ್ಲೇ 1.6 ಕೋಟಿ ಪ್ರಯಾಣಿಕರು ಬಂದು ಹೋಗುವುದರಿಂದ ಇಲ್ಲಿ ಅತಿಯಾದ ಪ್ರಯಾಣಿಕರ ಜನಸಂದಣಿ ಉಂಟಾಗುತ್ತದೆ. ಇದೇ ಕಾರಣಕ್ಕೆ ಟರ್ಮಿನಲ್ 2ರ ನಿರ್ಮಾಣವಾಗಿದೆ. ವಿಶೇಷವಾಗಿ ಟರ್ಮಿನಲ್ 2ರಲ್ಲಿ ಅಳಿವಿನಂಚಿನಲ್ಲಿರುವ ಸಸ್ಯಗಳು, ಕಸಿ ಮಾಡಿದ ಮರಗಳನ್ನು ಪೋಷಿಸುವುದರೊಂದಿಗೆ ಸಣ್ಣ ಜಲಪಾತವನ್ನೂ ನಿರ್ಮಾಣ ಮಾಡಲಾಗಿದೆ.
ಇದನ್ನೂ ಓದಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ರ ಸೊಬಗನ್ನು ಕಣ್ತುಂಬಿಕೊಳ್ಳಿ