ಆನೇಕಲ್: ಸ್ಮಶಾನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದ ಪ್ರತಿಭಟನಾಕಾರರನ್ನು ದಂಡಾಧಿಕಾರಿಗಳೇ ಸಭೆಗೆ ಆಹ್ವಾನಿಸಿ ಅಹವಾಲನ್ನು ಸ್ವೀಕರಿಸಿದ ಘಟನೆ ತಾಲೂಕು ಕಚೇರಿಯಲ್ಲಿ ನಡೆಯಿತು.
ಜಿಲ್ಲೆಯಲ್ಲಿ ಕರ್ನಾಟಕ ರಿಪಬ್ಲಿಕನ್ ಸೇನೆ ಸಂಘವೂ ಮಾಯಸಂದ್ರ, ಎಂ ಮೇಡಹಳ್ಳಿ, ಮಂಚನಹಳ್ಳಿ ಸುತ್ತಲು ಬಡವರಿಗೆ ನಿವೇಶನವಿಲ್ಲ. ಅಕ್ರಮವಾಗಿ ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡವರ ಹೆಸರು ಸಕ್ರಮದ ಪಟ್ಟಿಯಲ್ಲಿಲ್ಲ, ಅಷ್ಟೇ ಅಲ್ಲದೆ ಊರಿಗೊಂದು ಸ್ಮಶಾನವೂ ಇಲ್ಲ ಎಂದು ಹೋರಾಟ ನಡೆಸಿದ್ದರು. ಜೊತೆಗೆ ಸೂರಿಲ್ಲದವರಿಗೆ ನೆತ್ತಿಗೊಂದು ಸೂರು ನೀಡಬೇಕು. ಈಗಾಗಲೆ ಅಕ್ರಮ ಜಾಗದಲ್ಲಿ ನಿರ್ಮಿಸಿಕೊಂಡಿರುವ ನಿವಾಸಿಗಳಿಗೆ ಹಕ್ಕುಪತ್ರ ನೀಡಬೇಕು. ಪ್ರತಿ ಗ್ರಾಮಗಳಿಗೂ ಸ್ಮಶಾನ ಗುರುತಿಸಿ ಆವರಣ ಹಾಕಿ ಕೊಡಬೇಕೆಂದು ತಾಲೂಕು ಆಡಳಿತವನ್ನು ಒತ್ತಾಯಿಸಿದ್ದರು.
ಅಷ್ಟೇ ಅಲ್ಲದೆ ಗ್ರಾಮದಲ್ಲಿನ ಸರ್ಕಾರಿ ಗೋಮಾಳ, ಕೆರೆ, ರಾಜಕಾಲುವೆ, ಗುಂಡುತೋಪುಗಳನ್ನ ಹಾಗೂ ಅಳಿದುಳಿದ ಸ್ಮಶಾನ ಜಾಗವನ್ನೂ ಊರಿನ ಪ್ರಬಲ ನಾಯಕರು ಈಗಾಗಲೇ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಭೂ ಕಬಳಿಕೆದಾರರಿಗೆ ಹೋರಾಟಗಾರರು ಹಿಡಿ ಶಾಪ ಹಾಕಿದ್ದರು. ತದನಂತರ ಈ ಮಾಹಿತಿಯನ್ನು ಮನವಿ ಮೂಲಕ ತಾಲೂಕು ಶಕ್ತಿ ಕೇಂದ್ರಕ್ಕೆ ತಲುಪಿಸಿದ್ದರು.
ಇದನ್ನು ಮನಗಂಡ ತಹಸೀಲ್ದಾರ್ ಮಹದೇವಯ್ಯ ಹೋರಾಟಗಾರರನ್ನು ಕಚೇರಿಗೆ ಕರೆಸಿ ಲಿಖಿತ ರೂಪದಲ್ಲಿ ಅರ್ಜಿಗಳೊಂದಿಗೆ ದಾಖಲೆಗಳನ್ನು ಪಡೆದರು. ಆನಂತರ ಅರ್ಜಿಗಳನ್ನು ನಿಯಮದಂತೆ ಪರಿಶೀಲಿಸಿ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಭರವಸೆಯನ್ನು ನೀಡಿದರು. ಜೊತೆಗೆ ಅದೇ ವೇಳೆ ಗ್ರಾಮಗಳಿಗೆ ಅಗತ್ಯ ಸ್ಮಶಾನದ ಜಾಗಗಳು ಹಾಗೂ ಸರ್ಕಾರಿ ಜಮೀನು ಗುರುತಿಸಿ ಕೊಡುವಂತೆ ತಮ್ಮ ಅಧೀನ ಸಿಬ್ಬಂದಿಗೆ ತಹಸೀಲ್ದಾರ ಮೌಖಿಕ ಆದೇಶ ಹೊರಡಿಸಿದರು.