ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ): ಗಂಡ ಡ್ರೈವರ್ ಆಗಿ, ಹೆಂಡತಿ ಸಹಾಯಕಿ ಕೆಲಸ ಮಾಡುತ್ತಿದ್ದ ಶಾಲೆಯಲ್ಲೇ ಕಲಿತ ಮಗಳು SSLC ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ತಾಲೂಕಿಗೆ ಟಾಪರ್ ಆಗಿದ್ದಾರೆ. ಗರಿಷ್ಠ ಅಂಕ ಗಳಿಸುವ ಮೂಲಕ ಹೆತ್ತವರಿಗೂ ಮತ್ತು ಶಾಲೆಗೆ ಹೆಸರು ತಂದಿದ್ದಾರೆ.
ಬಡ ಕುಟುಂಬದ ಸಾಧಾರಣ ಹುಡುಗಿ ಸ್ಫೂರ್ತಿ.ಎ, ಯಾರು ಸಹ ನಿರೀಕ್ಷೆಯನ್ನ ಮಾಡಲಾಗದ ಸಾಧನೆ ಮಾಡಿದ್ದಾಳೆ. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕಗಳಿಸುವ ಮೂಲಕ ದೊಡ್ಡಬಳ್ಳಾಪುರ ತಾಲೂಕಿನಲ್ಲೇ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿನಿಯಾಗಿದ್ದಾಳೆ. 625 ಅಂಕಗಳಿಗೆ 618 ಅಂಕ ಪಡೆದು ಶೇ.98.88 ಫಲಿತಾಂಶದೊಂದಿಗೆ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಆಗುವ ಮೂಲಕ ತಾಲೂಕು, ಶಾಲೆಗೆ, ಪೋಷಕರಿಗೆ ಕೀರ್ತಿ ತಂದಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಮಾರೇನಹಳ್ಳಿಯ ಸ್ಫೂರ್ತಿ ದಲಿತ ಕುಟುಂಬದ ಹೆಣ್ಣು ಮಗಳು, ಅಪ್ಪ ಆನಂದ್ ಡ್ರೈವರ್ ಕೆಲಸ ಮಾಡುತ್ತಿದ್ದಾರೆ. ಅಮ್ಮ ನಾಗರತ್ನ ಶಾಲೆಯಲ್ಲಿ ಸಹಾಯಕಿ ಕೆಲಸ ಮಾಡುತ್ತಿದ್ದಾರೆ, ವಿಶೇಷತೆ ಅಂದ್ರೆ ಅಪ್ಪ ಅಮ್ಮ ಇಬ್ಬರು ಮೆಳೆಕೋಟೆಯ ಎಸ್.ಜೆ.ಸಿ.ಆರ್ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ, ಮಗಳು ಸಹ ಅದೇ ಶಾಲೆಯಲ್ಲಿ ವಿದ್ಯಾಭ್ಯಾಸ ಕಲಿತು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಟಾಪರ್ ಆಗಿದ್ದಾರೆ.
ಇದನ್ನೂ ಓದಿ: SSLCಯಲ್ಲಿ ಶೇ 83.89 ಫಲಿತಾಂಶ: ನಾಲ್ವರಿಗೆ 625ಕ್ಕೆ 625! ಚಿತ್ರದುರ್ಗ ಫಸ್ಟ್; ಯಾದಗಿರಿ ಲಾಸ್ಟ್
ಮಗಳ ಸಾಧನೆ ಬಗ್ಗೆ ಮಾತನಾಡಿದ ತಂದೆ ಆನಂದ್, ನನ್ನ ಮಗಳ ಬಗ್ಗೆ ನನಗೆ ಹೆಮ್ಮೆ ಇದೆ. ಅವಳು ಎಲ್ಲಿಯವರೆಗೆ ವಿದ್ಯಾಭ್ಯಾಸ ಮುಂದುವರಿಸುತ್ತಾಳೋ ಅಲ್ಲಿಯವರೆಗೆ ಓದಿಸಿ ಒಳ್ಳೆ ಅಧಿಕಾರಿಯನ್ನಾಗಿ ಮಾಡುತ್ತೇನೆ ಎಂದು ಹೇಳಿದರು. ತಾಯಿ ನಾಗರತ್ನ ಮಾತನಾಡಿ, ನಾನು ನನ್ನ ಮಗಳು ಓದುವ ಶಾಲೆಯಲ್ಲೇ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಮಗಳ ಬಗ್ಗೆ ನನಗೆ ಬಹಳ ಹೆಮ್ಮೆ ಇದೆ. ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡು ತಾಲೂಕಿಗೆ ಕೀರ್ತಿ ತಂದಿದ್ದಾಳೆ. ಓದಿನಲ್ಲಿ ಯಾವಾಗಲೂ ಮೊದಲೇ ಇದ್ದಳು, ಉತ್ತಮ ಅಂಕ ಪಡೆಯುತ್ತಿದ್ದಳು, ತಾಲೂಕಿಗೆ ಟಾಪರ್ ಆಗುತ್ತಾಳೆ ಎಂದು ಅಂದುಕೊಂಡಿರಲಿಲ್ಲ ಎಂದು ಖುಷಿಪಟ್ಟರು. ಶಾಲೆಯಲ್ಲೂ ಶಿಕ್ಷಕರು ಎಲ್ಲ ವಿದ್ಯಾರ್ಥಿಗಳೂ ಉತ್ತಮ ಪ್ರೋತ್ಸಾಹ ನೀಡುತ್ತಿದ್ದರು ಎಂದು ಹೇಳಿದರು.
ತನ್ನ ಸಾಧನೆಯ ಬಗ್ಗೆ ಮಾತನಾಡಿದ ಸ್ಫೂರ್ತಿ, ಶಾಲಾ ಶಿಕ್ಷಕರು, ಪೋಷಕರ ಪ್ರೋತ್ಸಾಹದಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು. ಚೆನ್ನಾಗಿ ಓದಿ, ತಂದೆ-ತಾಯಿಗೆ ಒಳ್ಳೆ ಹೆಸರು ತರಬೇಕೆಂಬ ಕಾರಣಕ್ಕೆ ಹಠ ತೊಟ್ಟು ಪ್ರತಿ ದಿನ ಅವತ್ತಿನ ಪಾಠವನ್ನು ಆ ದಿನವೇ ಅಭ್ಯಾಸ ಮಾಡುತ್ತಿದ್ದೆ. ಶಾಲೆಯಲ್ಲೂ ಟೀಚರ್ಸ್ ತುಂಬಾ ಬೆಂಬಲ ನೀಡುತ್ತಿದ್ದರು, ಪರಿಶ್ರಮ್ಕಕೆ ತಕ್ಕ ಪ್ರತಿಫಲ ದಕ್ಕಿದೆ. ಮುಂದೆ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡಿ ಸಿಎ ಆಗುತ್ತೇನೆ ಎಂದು ತಮ್ಮ ಮನದಾಸೆ ವ್ಯಕ್ತಪಡಿಸಿದರು.
ಇದನ್ನೂ ಓದಿ : ಸಹೋದರನ ಸಾವಿನ ದುಃಖದಲ್ಲಿಯೇ SSLC ಪರೀಕ್ಷೆ ಬರೆದು ಅಂತ್ಯಕ್ರಿಯೆಯಲ್ಲಿ ಭಾಗಿಯಾದ ಸಹೋದರಿ