ದೊಡ್ಡಬಳ್ಳಾಪುರ: ಬಯಲಲ್ಲಿ ಆಟವಾಡುತ್ತಿದ್ದ 4 ವರ್ಷದ ಬಾಲಕಿಯ ಮೇಲೆ ಬೀದಿನಾಯಿ ದಾಳಿ ಮಾಡಿದ್ದು, ಬಾಲಕಿಯ ಕುತ್ತಿಗೆಗೆ ಬಾಯಿ ಹಾಕಿದೆ. ಅದೃಷ್ಟವಶಾತ್ ಸಂಬಂಧಿಕರು ಅದೇ ಸಮಯಕ್ಕೆ ಅಲ್ಲಿಗೆ ಬಂದಿದ್ದು, ಬಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ದೊಡ್ಡಬಳ್ಳಾಪುರ ನಗರದ ಗಾಣಿಗರಪೇಟೆಯ ವಾಸವಿ ಕಲ್ಯಾಣ ಮಂಟಪದ ಬಳಿ ಮಂಗಳವಾರ ಸಂಜೆ ಈ ಘಟನೆ ನಡೆದಿದೆ.
ರಾಜೀವ್ ಎನ್ನುವವರ ನಾಲ್ಕು ವರ್ಷದ ಮಗಳ ಮೇಲೆ ಬೀದಿನಾಯಿ ದಾಳಿ ಮಾಡಿದೆ. ಬಯಲಲ್ಲಿ ಮಕ್ಕಳ ಜೊತೆ ಆಟವಾಡುತ್ತಿದ್ದ ಬಾಲಕಿ ಮನೆ ಕಡೆಗೆ ಬರುತ್ತಿದ್ದ ವೇಳೆ ಬೀದಿನಾಯಿಯೊಂದು ಪುಟ್ಟ ಬಾಲಕಿಯ ಮೇಲೆ ಎರಗಿದೆ. ಬಾಲಕಿಯ ಕುತ್ತಿಗೆಯ ಹಿಂದಿನ ಭಾಗಕ್ಕೆ ಬಾಯಿ ಹಾಕಿದ್ದು, ಬೆನ್ನಿನ ಮೇಲೂ ಬಲವಾಗಿ ಪರಚಿದೆ. ಬಾಲಕಿಯ ಅದೃಷ್ಟಕ್ಕೆ ಅದೇ ಸಮಯಕ್ಕೆ ಸಂಬಂಧಿಕರೊಬ್ಬರು ಅಲ್ಲಿಗೆ ಬಂದಿದ್ದು, ನಾಯಿಯಿಂದ ಕಂದನನ್ನು ರಕ್ಷಣೆ ಮಾಡಿದ್ದಾರೆ.
ಮಗಳ ಮೇಲೆ ಬೀದಿನಾಯಿ ದಾಳಿ ಮಾಡಿದ ಬಗ್ಗೆ ಮಾತನಾಡಿದ ರಾಜೀವ್, "ಮಗಳು ಆಟ ಆಡ್ತಿದ್ದ ವೇಳೆ ಅವಳ ಮೇಲೆ ನಾಯಿ ದಾಳಿ ಮಾಡಿದೆ. ಕುತ್ತಿಗೆಯ ಹಿಂಭಾಗದಲ್ಲಿ ಕಚ್ಚಿ ಹಿಡಿದಿತ್ತು. ಆ ಸಮಯದಲ್ಲಿ ನಮ್ಮ ಸಂಬಂಧಿಕರೊಬ್ಬರು ಆ ದಾರಿಯಾಗಿ ಬಂದಿದ್ದು, ಅವರು ಮಗಳನ್ನು ನಾಯಿಯ ಬಾಯಿಯಿಂದ ರಕ್ಷಣೆ ಮಾಡಿದ್ದಾರೆ. ತಕ್ಷಣ ನಾವು ಮಗಳನ್ನು ಮಣಿಪಾಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೂಕ್ತ ಚಿಕಿತ್ಸೆ ಕೊಡಿಸಿದ್ದೇವೆ. ಆದರೂ ವೈದ್ಯರು ಒಂದು ತಿಂಗಳವರೆಗೆ ಕಾದು ನೋಡಬೇಕು ಎಂದು ಹೇಳಿದ್ದಾರೆ. ಮಗಳ ಕುತ್ತಿಗೆಯ ಹಿಂದೆ ಭಾಗದಲ್ಲಿ ಗಂಭೀರ ಗಾಯಗಳಾಗಿವೆ. ಒಂದು ವೇಳೆ ನಾಯಿ ಕುತ್ತಿಗೆಯ ಮುಂಭಾಗದಿಂದ ಕಚ್ಚಿ ಹಿಡಿಯುತ್ತಿದ್ದರೆ. ಜೊತೆಗೆ ಆ ಸಮಯಕ್ಕೆ ನಮ್ಮ ಸಂಬಂಧಿಕರು ಬರದೇ ಇರುತ್ತಿದ್ದರೆ, ಸ್ಥಿತಿ ತುಂಬಾ ಗಂಭೀರವಾಗಿರುತ್ತಿತ್ತು" ಎಂದು ಹೇಳಿದರು.
ದೊಡ್ಡಬಳ್ಳಾಪುರದಲ್ಲಿ ಇತ್ತೀಚೆಗೆ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ. ನಿನ್ನೆ ಶಾಂತಿನಗರದಲ್ಲಿ 5 ಜನರಿಗೆ, ರೋಜಿಪುರದಲ್ಲಿ 10 ಜನರಿಗೆ ಬೀದಿನಾಯಿಗಳು ಕಚ್ಚಿದ ಪ್ರಕರಣಗಳು ಪತ್ತೆಯಾಗಿವೆ. ಕಳೆದ ತಿಂಗಳಲ್ಲಿ 800 ಜನರಿಗೆ ಬೀದಿನಾಯಿ ಕಚ್ಟಿದ ಪ್ರಕರಣಗಳು ವರದಿಯಾಗಿವೆ. ಬೀದಿನಾಯಿಗಳ ಉಪಟಳದಿಂದ ಜನರು ಕಂಗಲಾಗಿದ್ದಾರೆ. ಬೀದಿನಾಯಿಗಳಿಗೆ ಕಡಿವಾಣ ಹಾಕಬೇಕಿದ್ದ ನಗರಸಭೆ ಅಧಿಕಾರಿಗಳು ಕೈಕಟ್ಟಿ ಕುಳಿತಿದ್ದಾರೆ. ಬೀದಿನಾಯಿಗಳನ್ನು ಹಿಡಿಯಲು ಗುತ್ತಿಗೆದಾರರಿಗೆ ವರ್ಕ್ ಆರ್ಡರ್ ಕೊಡಲಾಗಿದೆ. ಆದರೆ ನಾಯಿಗಳನ್ನು ಹಿಡಿಯುವ ಕೆಲಸ ಮಾತ್ರ ಪ್ರಾರಂಭವಾಗಿಲ್ಲ. ನಗರಸಭೆಯ ನಿರ್ಲಕ್ಷ್ಯತೆಗೆ ಅಕ್ರೋಶಗೊಂಡಿರುವ ಸ್ಥಳೀಯರು ನಗರಸಭೆ ಕಚೇರಿ ಮುಂದೆ ಪ್ರತಿಭಟನೆ ಮಾಡುವ ಎಚ್ಚರಿಕೆಯನ್ನು ನೀಡಿದ್ದಾರೆ.
ಇದನ್ನೂ ಓದಿ: ಬೀದಿನಾಯಿಗಳ ಕಾಟಕ್ಕೆ ಬೇಸತ್ತ ಬಳ್ಳಾರಿ ಜನ.. ಇಂದು ಒಂಬತ್ತು ಜನರ ಮೇಲೆ ದಾಳಿ, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ...!