ದೊಡ್ಡಬಳ್ಳಾಪುರ : ಆಕಸ್ಮಿಕ ಸನ್ನಿವೇಶದಲ್ಲಿ ದೇವರ ಮನೆಗೆ ನುಗ್ಗಿದ ಹಾವನ್ನು ಹಿಡಿದಾಗ ಮುಂದೊಂದು ದಿನ ಸಾವಿರಾರು ಉರಗ ಸಂರಕ್ಷಿಸುತ್ತೇನೆಂದು ಕನಸು ಮನಸಿನಲ್ಲೂ ಅಂದುಕೊಂಡಿರಲಿಲ್ಲ. ಆದರೆ, ಸ್ನೇಕ್ ಸಾಧಿಕ್ ಎಂದು ಫೇಮಸ್ ಆಗಿರೋ ಈ ಸಾಹಸಿ ಬರೋಬ್ಬರಿ 7965 ಹಾವುಗಳನ್ನ ಹಿಡಿದು ಸಂರಕ್ಷಣೆ ಮಾಡಿದ್ದಾರೆ.
ತಾಲೂಕಿನ ಪಾಲನಜೋಗಹಳ್ಳಿಯ ನಿವಾಸಿ ಸಾಧಿಕ್, ಸ್ನೇಕ್ ಸಾಧಿಕ್ ಅಂತಾನೇ ತಾಲೂಕಿನಲ್ಲಿ ಪ್ರಸಿದ್ದರು. ದೊಡ್ಡಬಳ್ಳಾಪುರ ತಾಲೂಕಿನ ಯಾವುದೇ ಜನವಸತಿ ಪ್ರದೇಶಕ್ಕೆ ಹಾವು ಬಂದರೆ ಸ್ನೇಕ್ ಸಾಧಿಕ್ ಅವರಿಗೆ ಕರೆ ಹೋಗುತ್ತೆ.
ಬಜಾಜ್ ಚೇತಕ್ ಸ್ಕೂಟರ್‌ನಲ್ಲಿ ಕ್ಷಣದಲ್ಲೇ ಹಾಜರಾಗುವ ಸ್ನೇಕ್ ಸಾಧಿಕ್ ಬಿಲದಲ್ಲಿರಲಿ, ಪೊದೆಯೊಳಗಿರಲಿ ಹಾವಿಗೆ ತೊಂದರೆಯಾಗದಂತೆ ಹಿಡಿಯುತ್ತಾರೆ. ಹಿಡಿದ ಹಾವನ್ನು ಘಾಟಿ ಸುಬ್ರಹ್ಮಣ್ಯ ಕ್ಷೇತ್ರದ ಅರಣ್ಯ ಪ್ರದೇಶದಲ್ಲಿ ಬಿಡುವ ಮೂಲಕ ಹಾವುಗಳ ಸಂರಕ್ಷಕನಾಗಿದ್ದಾರೆ.
ವೃತ್ತಿಯಿಂದ ಮೂಲತಃ ಅಡುಗೆಭಟ್ಟನಾಗಿರುವ ಸಾಧಿಕ್, ಪ್ರವೃತ್ತಿಯಾಗಿ ಉರಗ ಸಂರಕ್ಷಣೆ ಕಾರ್ಯ ಮಾಡ್ತಿದ್ದಾರೆ. ಕರೆ ಬಂದ್ರೇ ಹಾವುಗಳ ಸಂರಕ್ಷಣೆ ಮಾಡುತ್ತಾರೆ, ಅಂದ ಹಾಗೇ ಸಾಧಿಕ್ ಹಾವುಗಳ ರಕ್ಷಕನಾಗಿದ್ದು ಆಕಸ್ಮಿಕ ಘಟನೆಯಿಂದ. ತಮ್ಮ 35ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಹಾವು ಹಿಡಿದರು. ದೇವರ ಮನೆಗೆ ಹಾವು ನುಗ್ಗಿತ್ತು, ಇದರಿಂದ ಮನೆಯವರು ಸಾಕಷ್ಟು ಭಯಗೊಂಡಿದ್ದರು.
ಹಾವನ್ನು ಹಿಡಿಯುವ ಪ್ರಯತ್ನ ಮಾಡಿ ಸೋತು ಹೋಗಿದ್ರು. ಇದೇ ಸಮಯಕ್ಕೆ ಸ್ಥಳದಲ್ಲಿದ್ದ ಸಾಧಿಕ್ ಹಾವನ್ನು ಹಿಡಿಯುವ ಧೈರ್ಯ ಮಾಡುತ್ತಾರೆ. ಹಾವಿನ ಮುಂದೆ ಪ್ಲಾಸ್ಟಿಕ್ ಬಿಂದಿಗೆ ಇಟ್ಟರೆ ಬಿಲವೆಂದು ತಿಳಿದು ಹಾವು ಪ್ಲಾಸ್ಟಿಕ್ ಬಿಂದಿಗೆ ಒಳ ಹೋಗುತ್ತೆ, ಇದೇ ಉಪಾಯದೊಂದಿಗೆ ಅಂದು ಸುರಕ್ಷಿತವಾಗಿ ಹಾವು ಹಿಡಿದು ಸೈ ಎನಿಸಿಕೊಂಡರು. ಅಂದಿನಿಂದ ಇವತ್ತಿನವರೆಗೂ ಸುಮಾರು 7965 ಹಾವುಗಳನ್ನ ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.
ಓದಿ :ಇದು ಭೂತ್ ಎಂಬ ಗ್ರಾಮದ ಕಥೆ ; ಹೆಸರಿನಿಂದಲೇ ಜನರ ಮನಸ್ಸಿನಲ್ಲಿ ಭಯ ಹುಟ್ಟಿಸುವುದೇಕೆ!?
ಹಾವನ್ನು ಹಿಡಿಯುವ ವೇಳೆ ಹಲವು ಸಲ ಹಾವಿನಿಂದ ಕಚ್ಚಿಸಿಕೊಂಡಿದ್ದಾರೆ. ಹಾವಿನ ಕಡಿತಕ್ಕೆ ಔಷಧಿಯನ್ನು ಕಂಡುಕೊಂಡಿರುವ ಸಾಧಿಕ್ ತಾವೇ ಔಷಧಿ ತಯಾರಿಸಿ ಸೇವನೆ ಮಾಡುತ್ತಾರೆ. ಜೊತೆಗೆ ಮಂತ್ರ ಶಕ್ತಿ ಪ್ರಯೋಗಿಸಿ ಹಾವಿನ ವಿಷ ದೇಹಕ್ಕೆ ಏರದಂತೆ ಮಾಡುವ ವಿದ್ಯೆ ಕಲಿತ್ತಿದ್ದಾರಂತೆ. ಮನೆಯವರ ವಿರೋಧದ ನಡುವೆಯೂ ಜನಸೇವೆ ಜತೆಗೆ ಪ್ರಕೃತಿ ಸಮತೋಲನಕ್ಕಾಗಿ ಉರಗಗಳನ್ನ ರಕ್ಷಿಸುವ ಮಹತ್ಕಾರ್ಯ ಮಾಡ್ತಿದ್ದಾರೆ.