ನೆಲಮಂಗಲ: ರಕ್ಷಣೆ ಮಾಡುವಾಗ ನಾಗರಹಾವು ಕಡಿದು ಅಸ್ವಸ್ಥಗೊಂಡು ಕಳೆದ ಒಂದು ವಾರದಿಂದ ಆಸ್ಪತ್ರೆಗೆ ದಾಖಲಾಗಿದ್ದ ಸ್ನೇಕ್ ಲೋಕೇಶ್ ಚಿಕಿತ್ಸೆ ಫಲಿಸದೇ ಇಂದು ಬೆಳಿಗ್ಗೆ ಸಾವನ್ನಪ್ಪಿದ್ದಾರೆ. ನೆಲಮಂಗಲ ತಾಲೂಕಿನ ಡಾಬಸ್ ಪೇಟೆಯಲ್ಲಿ ಆ.17 ರಂದು ಇವರು ಹಾವು ರಕ್ಷಣೆ ಮಾಡಲು ತೆರಳಿದ್ದರು. ಈ ರಕ್ಷಣಾ ಕಾರ್ಯಾಚರಣೆ ವೇಳೆ ಅವರ ಬಲಗೈ ಬೆರಳಿಗೆ ವಿಷಪೂರಿತ ನಾಗರಹಾವು ಕಚ್ಚಿತ್ತು. ತಕ್ಷಣವೇ ಅವರಿಗೆ ನೆಲಮಂಗಲ ಖಾಸಗಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಿ ಬೆಂಗಳೂರಿನ ಮಣಿಪಾಲ್ಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸಲಿಲ್ಲ.
ನೆಲಮಂಗಲದ ಮಾರುತಿನಗರದ ನಿವಾಸಿಯಾಗಿದ್ದ ಅವರಿಗೆ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ, ನೆಲಮಂಗಲದಲ್ಲಿ ಪುಟ್ಟ ಹೊಟೇಲ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು, ಕಲೆಯ ಬಗ್ಗೆ ಆಸಕ್ತಿ ಹೊಂದಿದ್ದ ಅವರು ಆರ್ಕೆಸ್ಟ್ರಾದಲ್ಲಿ ಗಾಯಕರಾಗಿ ಕೆಲಸ ಮಾಡಿದ್ದಾರೆ, ಧಾರಾವಾಹಿಗಳಲ್ಲಿ ಸಹ ನಟಿಸಿದ್ದಾರೆ.
ಪರಿಸರ ಮತ್ತು ವನ್ಯಜೀವಿಗಳ ಪ್ರೇಮಿಯಾಗಿದ್ದ ಲೋಕೇಶ್, ಹಾವುಗಳ ಸಂರಕ್ಷಣೆಯಲ್ಲಿ ಸೇವೆ ಮಾಡಲು ಪ್ರಾರಂಭಿಸುತ್ತಾರೆ, ನೆಲಮಂಗಲ ಸುತ್ತಮುತ್ತ ಯಾರೇ ಕರೆದ್ರು ಎಷ್ಟೇ ದೂರ ಇದ್ರು ಹೋಗಿ ಹಾವು ಸಂರಕ್ಷಣೆ ಮಾಡಿ ಬರುತ್ತಿದ್ದರು ಇದಕ್ಕಾಗಿ ಅವರು ಯಾವುದೇ ಹಣ ನಿರೀಕ್ಷೆ ಮಾಡುತ್ತಿರಲಿಲ್ಲ, ಒಂದು ಅಂದಾಜಿನ ಪ್ರಕಾರ 35 ಸಾವಿರಕ್ಕೂ ಹಾವುಗಳ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.
ಲೋಕೇಶ್ ನೆಲಮಂಗಲ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಾವಿರಾರು ಹಾವುಗಳ ರಕ್ಷಣೆ ಮಾಡಿ ಸ್ನೇಕ್ ಲೋಕೇಶ್ ಎಂದು ಹೆಸರಾಗಿದ್ದರು. ಬರಿಗೈಯಲ್ಲಿ ಉರಗ ರಕ್ಷಣೆ ಮಾಡುವಾಗ ಹಾವು ಕಚ್ಟಿದ್ದರಿಂದ ಅವರು ಸಾವನ್ನಪ್ಪಿದ್ದಾರೆ. ಆದ್ದರಿಂದ ಉರಗ ಪ್ರೇಮಿಗಳು ಹಾವು ಹಿಡಿಯುವಾಗ ಎಚ್ಚರಿಕೆ ವಹಿಸುವುದು ಬಹಳ ಮುಖ್ಯ ಎಂದು ವೈದ್ಯರು ಹೇಳಿದ್ದಾರೆ.
ಇದನ್ನೂ ಓದಿ: ಹಾವು ಕಚ್ಚಿ ಮೃತಪಟ್ಟ ಬಾಲಕ.. ಮಾಂತ್ರಿಕನ ಮಾತು ಕೇಳಿ ಹೂತಿದ್ದ ಶವ ತೆಗೆದ ಜನರು